ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ಡಿ.ಕೆ ಶಿವಕುಮಾರ್ 
ರಾಜ್ಯ

ಅಭಿವೃದ್ಧಿಯೇ ತಂದೆ ತಾಯಿ, ಗ್ಯಾರಂಟಿಗಳೇ ಬಂಧು ಬಳಗ: ಡಿ.ಕೆ ಶಿವಕುಮಾರ್

ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತ,‌ ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು.

ಕನಕಪುರ: ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ ತಂದೆ, ಗ್ಯಾರಂಟಿಗಳೇ ಬಂಧು ಬಳಗ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕನಕಪುರ ತಾಲ್ಲೂಕಿನ ಭೂಹಳ್ಳಿ ಹೊಸಕೆರೆ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, "ನನ್ನ ಕ್ಷೇತ್ರಕ್ಕೆ ಸುಮಾರು ರೂ.400 ಕೋಟಿಗಳಷ್ಟು ಅನುದಾನ ತಂದಿದ್ದೇನೆ. ಒಂದೇ ಸಲ ಅನುದಾನ ತಂದರೆ ಬೇರೆ ಕ್ಷೇತ್ರದವರು ಪ್ರಶ್ನೆ ಮಾಡುತ್ತಾರೆ. ಹಂತ,‌ ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸದ ಮೂಲಕ ಜನರ ಋಣ ತೀರಿಸಲಾಗುವುದು. ರೂ.250 ಕೋಟಿ ಮೊತ್ತದ ಕಾಮಗಾರಿಗಳು ನೀರಾವರಿ ಇಲಾಖೆಯಿಂದಲೇ ನಡೆಯುತ್ತಿದೆ" ಎಂದರು.

ಪಾದ್ದರೆಯಿಂದ ಭೂಹಳ್ಳಿ ಅರಣ್ಯ ತಪಾಸಣಾ ಕೇಂದ್ರದ ವರೆಗೆ ಸುಮಾರು ರೂ.13 ಕೋಟಿ ವೆಚ್ಚದಲ್ಲಿ ರಸ್ತೆ, ದೊಡ್ಡಆಲಹಳ್ಳಿಯಿಂದ ಕಬ್ಬಾಳಿನ ತನಕ 40 ಕೋಟಿ ವೆಚ್ಚದಲ್ಲಿ ರೂ.14.5 ಕಿಮೀ ಉದ್ದದ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಇದರಿಂದ ನಮ್ಮ ಜನರ ಆಸ್ತಿ ಮೌಲ್ಯ ಹೆಚ್ಚಾಗಲಿದೆ" ಎಂದು ಹೇಳಿದರು.

ಕನಕಪುರ, ಸಾತನೂರು, ದೊಡ್ಡ ಆಲಹಳ್ಳಿ ರಸ್ತೆಗಳನ್ನು ಅಗಲೀಕರಣ ಮಾಡಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ನಗುತ್ತಿದ್ದರು. ಆದರೆ ಇಂದು ಕೆಲಸವನ್ನು ಮಾಡಿ ತೋರಿಸಿದ್ದೇವೆ. ರಸ್ತೆ ಅಭಿವೃದ್ಧಿಗೆ ಎಂದು ರೂ.135 ಕೋಟಿ, ಹೊಸಕೆರೆ ತುಂಬಿಸಲು ರೂ.108 ಕೋಟಿ ಖರ್ಚು ಮಾಡಲಾಗುತ್ತಿದೆ.

ನಲ್ಲಳ್ಳಿ- ಮುಲ್ಲಳ್ಳಿ ಸಂಪರ್ಕ ಸೇತುವೆಗೆ ರೂ.11 ಕೋಟಿ, ಅರ್ಕಾವತಿಯಿಂದ ನೀರನ್ನು ಎತ್ತಿ ದೊಡ್ಡ ಆಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸೂಕ್ಷ್ಮ ನೀರಾವರಿ ಕಲ್ಪಿಸಲು ರೂ. 70 ಕೋಟಿಯ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ 8 ಗ್ರಾಮಗಳ 2 ಸಾವಿರ ಎಕರೆ ಭೂಮಿಗೆ ಉಪಯೋಗವಾಗಲಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ಕೊಕ್ಕರೆ ಹೊಸಹಳ್ಳಿ ಬಳಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ರೂ.10 ಕೋಟಿ ವೆಚ್ಚ ಮಾಡಲಾಗುತ್ತಿದೆ" ಎಂದು ತಿಳಿಸಿದರು. ನನ್ನ ಕ್ಷೇತ್ರದಲ್ಲಿ ಎಷ್ಟು ಕೆರೆಗಳನ್ನು ತುಂಬಿಸಲು ಸಾಧ್ಯವೋ ಅಷ್ಟು ಕೆರೆಗಳನ್ನು ತುಂಬಿಸುತ್ತೇನೆ. ಹಂತ,‌ ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ. ಅಧಿಕಾರ ಅವಧಿಯಲ್ಲಿ ಎಲ್ಲಾ ಕಡೆ ನೀರು ತುಂಬಿ ಹರಿಯಬೇಕು. ಚನ್ನಪಟ್ಟಣ, ರಾಮನಗರ, ಮಾಗಡಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಲಾಗಿದೆ. ಅಲ್ಲಿನ ಜನಕ್ಕೂ ನಾನು ಕೆಲಸ ಮಾಡಿಸುವುದಾಗಿ ಮಾತು ಕೊಟ್ಟಿದ್ದೇನೆ" ಎಂದರು.

ಮೇಕೆದಾಟು ಕಚೇರಿ ಪ್ರಾರಂಭ ಮಾಡಲಾಗಿದ್ದು. ಎಷ್ಟು ಜಮೀನು ಮುಳುಗಡೆಯಾಗುತ್ತದೆ ಎಂದು ಅಂದಾಜು ಮಾಡಲು ಕಂದಾಯ ಹಾಗೂ ಅರಣ್ಯ ಅಧಿಕಾರಿಗಳು ಕೆಲಸ ಪ್ರಾರಂಭ ಮಾಡಿದ್ದಾರೆ. ಕಾವೇರಿ ನದಿಯಿಂದ ನೀರನ್ನು ತಂದು ಜನರ ಬದುಕನ್ನು ಬದಲಾವಣೆ ಮಾಡುವ ದೊಡ್ಡ ಕೆಲಸ ನಡೆಯುತ್ತಿದೆ" ಎಂದರು.

ಒಬ್ಬ ವ್ಯಕ್ತಿಯ ಹಿಂದೆ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ ಆತ ಎಷ್ಟು ಜನರ ಬದುಕನ್ನು ಬದಲಾವಣೆ ಮಾಡಿದ ಎನ್ನುವುದು ಮುಖ್ಯ‌. ಕೆರೆ ತುಂಬಿಸುವ ಯೋಜನೆಯಿಂದ ಸಾವಿರಾರು ರೈತರಿಗೆ ಉಪಯೋಗವಾಗುತ್ತದೆ. ಅಂತರ್ಜಲ ಹೆಚ್ಚುತ್ತದೆ, ಭೂಮಿ ಸದಾ ಹಸಿರಾಗಿ ಇರುತ್ತದೆ. ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ" ಎಂದರು.

ಚೀನಾದಿಂದ ರೇಷ್ಮೆ ಆಮದು ಕಡಿಮೆಯಾಗಿದೆ. ಆದ ಕಾರಣಕ್ಕೆ ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ಅದಕ್ಕೆ ಯಾರೂ ಸಹ ಭೂಮಿಯನ್ನು ಮಾರಾಟ ಮಾಡಲು ಹೋಗಬೇಡಿ. ಮುಂದಕ್ಕೆ ನಿಮ್ಮ ಭೂಮಿಯ ಬೆಲೆ ಹೆಚ್ಚಲಿದೆ. ಶಿಡ್ಲಘಟ್ಟ ಭಾಗದಲ್ಲಿ ನಮಗಿಂತ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಸಿಲ್ಕ್ ಮತ್ತು ಮಿಲ್ಕ್ ಅನ್ನು ಕೋಲಾರ ಭಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ" ಎಂದರು.

ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ಸಾತನೂರು ಹೋಬಳಿಯನ್ನು ರಾಮನಗರಕ್ಕೆ ಸೇರಿಸಲು ಹೊರಟಿದ್ದರು. ಕನಕಪುರದಲ್ಲಿಯೇ ಸಾತನೂರನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳೀಯ ಮುಖಂಡರಿಂದ ದೊಡ್ಡ ಹೋರಾಟ ನಡೆದ ಕಾರಣಕ್ಕೆ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿದೆ" ಎಂದರು.

ಕ್ಷೇತ್ರ ಪುನರ್ ವಿಂಗಡಣೆ ವೇಳೆ ಎಸ್.ಎಂ.ಕೃಷ್ಣ ಅವರು ಹಾಗೂ ಕುಲದೀಪ್ ಸಿಂಗ್ ಅವರ ಪ್ರಯತ್ನದ ಫಲವಾಗಿ ಈ ಹೋಬಳಿ ಕನಕಪುರದಲ್ಲಿಯೇ ಉಳಿಯಿತು. ಈ ಸಂದರ್ಭದಲ್ಲಿ ನನಗೆ ಉಂಟಾದ ಸಮಾಧಾನಕ್ಕಿಂತ ಹೆಚ್ಚು ಸಮಾಧಾನವಾಗುತ್ತಿದೆ. ಏಕೆಂದರೆ ಕಾವೇರಿ ಸಂಗಮದಿಂದ ನೀರು ತಂದು ಈ ಭಾಗದ 21 ಕೆರೆಗಳಿಗೆ ತುಂಬಿಸುವ ಯೋಜನೆ ನನಗೆ ತೃಪ್ತಿ ನೀಡುತ್ತಿದೆ" ಎಂದು ಹೇಳಿದರು.

ರೈತರ ಬದುಕನ್ನು ಹಸನು ಮಾಡಬೇಕು‌ ಎಂದು ಸರ್ಕಾರದ ಮೇಲೆ ಪ್ರಭಾವ ಬೀರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಅಂದಿನ ಹೋಬಳಿ ಉಳಿಸಿ ಹೋರಾಟ ಇಂದಿಗೆ ಫಲ ಕೊಟ್ಟಿದೆ" ಎಂದರು.

ಕ್ಷೇತ್ರದ ಅನೇಕ ವಿದ್ಯಾವಂತ ಯುವಕರಿಗೆ ಅನೇಕ ಖಾಸಗಿ ಕಂಪೆನಿಗಳಲ್ಲಿ ಕೆಲಸ ಕೊಡಿಸಲಾಗಿದೆ. ಇನ್ನೂ ಬಾಕಿ ಇದ್ದರೆ ಅವರಿಗೂ ಕೆಲಸ ಕೊಡಿಸಲಾಗುವುದು" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT