ಬೆಂಗಳೂರು: ಜಪಾನ್ ರಾಷ್ಟ್ರದಲ್ಲಿ ಭಾರತೀಯರಿಗೆ ಉದ್ಯೋಗಾವಕಾಶಗಳು ಉತ್ತಮವಾಗಿದ್ದು, ಜಪಾನೀಸ್ ಭಾಷೆಯನ್ನು ಕಲಿಯುವ ಅವಕಾಶವನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ಟ್ಸುಟೊಮು ನಕಾನೆ ಅವರು ಸಲಹೆ ನೀಡಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷಾ ಕೇಂದ್ರದ 40 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಜಪಾನಿ ಭಾಷೆಯ ಕಲಿಕೆ ಸಾಂಸ್ಕೃತಿಕ, ಆರ್ಥಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಜಗತ್ತಿನಲ್ಲಿ ಭಾರತ ಅತ್ಯಂತ ಕಿರಿಯರನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ ಶಿಕ್ಷಣವು ಮಾನವ ಸಂಪನ್ಮೂಲವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಬೆಂಗಳೂರು ವಿವಿಯಲ್ಲಿ ಕಳೆದ 40 ವರ್ಷಗಳಿಗೂ ಮುನ್ನವೇ ಪ್ರಾರಂಭವಾಗಿರುವ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು ವಿವಿಧ ಸಂಸ್ಕೃತಿಗಳ ವಿನಿಮಯಕ್ಕೆ ನೆರವಾಗುತ್ತಿದೆ. ಹೆಚ್ಚು ಹೆಚ್ಚು ಜನರು ಇದನ್ನು ಬಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಜಪಾನಿನ ವಿದೇಶಾಂಗ ಸಚಿವಾಲಯದ ಸಲಹೆಗಾರರಾದ ಅಶೋಕ್ ಕುಮಾರ್ ಚಾವ್ಲಾ ಅವರು ಮಾತನಾಡಿ, ಜನಸಂಖ್ಯೆಯ ಕುಸಿತವನ್ನು ಎದುರಿಸುತ್ತಿರುವ ಜಪಾನ್, ನುರಿತ ಭಾರತೀಯ ವೃತ್ತಿಪರರನ್ನು ಕೈಬೀಸಿ ಕರೆಯುತ್ತಿದೆ ಎಂದು ಹೇಳಿದರು.
ಜಪಾನ್ ದೇಶದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಯಲ್ಲಿದ್ದರೂ ಉದ್ಯೋಗಾವಕಾಶಗಳು ವಿಕಾಸಗೊಳ್ಳುತ್ತಿದ್ದು, ಆಡಳಿತಾತ್ಮಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಭಾರತೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
ಬೆಂಗಳೂರು ನಗರ ವಿವಿಯ ಕುಲಪತಿ ಲಿಂಗರಾಜ ಗಾಂಧಿ ಮಾತನಾಡಿ, ಭಾರತದ ತಾಂತ್ರಿಕ ಪ್ರಗತಿ ಮತ್ತು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನಸಂಖ್ಯೆಯನ್ನು ಹೊಂದಿರುವ ಪ್ರಯೋಜನವನ್ನು ಒತ್ತಿ ಹೇಳಿದರು.
ಬೆಂಗಳೂರು ವಿವಿ ಮತ್ತು ಜಾಗತಿಕ ಭಾಷೆಗಳ ಕೇಂದ್ರಕ್ಕೆ ಇದು ಅತ್ಯಂತ ಮಹತ್ವದ ದಿನವಾಗಿದ್ದು, ಶ್ರೀಮಂತ ಇತಿಹಾಸ ಹೊಂದಿದೆ. ಈ ಕೇಂದ್ರದಲ್ಲಿ 14 ಭಾಷೆಗಳನ್ನು ಕಲಿಸಲಾಗುತ್ತಿದೆ ಎಂದು ವಿವರಿಸಿದರು.