ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮನೆ ಬಾಗಿಲಿಗೆ ಆಸ್ತಿ ದಾಖಲೆ ರವಾನೆ, ಅಕ್ರಮ ಕಟ್ಟಡ ನಿರ್ಮಾಣ ತಡೆಗೆ ಸರ್ಕಾರ ಕ್ರಮ: AI ತಂತ್ರಜ್ಞಾನ ಬಳಕೆಗೆ ಮುಂದು

ಹಲವು ಆಸ್ತಿ ಮಾಲೀಕರು ಅನುಮತಿಯಿಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಪ್ರಮಾಣಾನುಗುಣ ತೆರಿಗೆಗಳನ್ನು ಪಾವತಿಸುತ್ತಿಲ್ಲ. ಅಂತಹ ಅಕ್ರಮ ನಿರ್ಮಾಣಗಳನ್ನು ಗುರುತಿಸಲು ಮತ್ತು ಅಳೆಯಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತದೆ.

ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಡಿಕೆ.ಶಿವಕುಮಾರ್.
Manjula VN
Updated On : 25 Mar 2025, 7:44 am

ಬೆಂಗಳೂರು: ಬಿಬಿಎಂಪಿ ಆಸ್ತಿ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಮತ್ತು ಅಕ್ರಮ ನಿರ್ಮಾಣಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು, 2025-26ರ ಬಿಬಿಎಂಪಿ ಬಜೆಟ್ ಕುರಿತು ಸೋಮವಾರ ನಗರದ ಶಾಸಕರೊಂದಿಗೆ ಸಭೆ ನಡೆಸಿದರು.

ಸಭೆ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ಆಸ್ತಿ ಮಾಲೀಕರು ಅನುಮತಿಯಿಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಪ್ರಮಾಣಾನುಗುಣ ತೆರಿಗೆಗಳನ್ನು ಪಾವತಿಸುತ್ತಿಲ್ಲ. ಅಂತಹ ಅಕ್ರಮ ನಿರ್ಮಾಣಗಳನ್ನು ಗುರುತಿಸಲು ಮತ್ತು ಅಳೆಯಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತದೆ ಎಂದು ಹೇಳಿದರು.

Advertisement

Advertisement

ನಗರದ ಸುಮಾರು 7 ಲಕ್ಷ ಮನೆಗಳು ತೆರಿಗೆ ಕಟ್ಟಿರಲಿಲ್ಲ, ಇವುಗಳಲ್ಲಿ 1 ಲಕ್ಷ ಮನೆಗಳು ತೆರಿಗೆ ವ್ಯಾಪ್ತಿಗೆ ಬಂದಿದ್ದು, ಇನ್ನೂ 6 ಲಕ್ಷ ಮನೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕಿದೆ. ಆದ ಕಾರಣ ಒಂದು ಬಾರಿ ಪಾವತಿಗೆ ಅವಕಾಶ (ಓಟಿಎಸ್) ಮಾಡಿಕೊಡಲಾಯಿತು. ಅಕ್ರಮ ನಿರ್ಮಾಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಪಾಲಿಕೆಗೆ ಇರಲಿಲ್ಲ. ಕಳೆದ ವಾರ ಸದನದಲ್ಲಿ ಈ ಬಗ್ಗೆ ವಿಧೇಯಕ ಅಂಗೀಕಾರವಾಗಿದೆ. ಜೊತೆಗೆ ಕಂದಾಯ ಬಡಾವಣೆಗಳಲ್ಲಿ ಇರುವ ಖಾಸಗಿ ರಸ್ತೆಗಳನ್ನೂ ಸಹ ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಜನರ ಮನೆ ಬಾಗಿಲಿಗೆ ಖಾತಾಗಳನ್ನು ತಲುಪಿಸುವ ಉಪಕ್ರಮವನ್ನು ಏಪ್ರಿಲ್‌ನಿಂದ ಜಾರಿಗೆ ತರಲಾಗುವುದು ಎಂದು ಇದೇ ವೇಳೆ ಹೇಳಿದರು.

Also Read

ಬಿಬಿಎಂಪಿ ಬಜೆಟ್: ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸುರಂಗ ರಸ್ತೆ ಯೋಜನೆ

ನಗರದಲ್ಲಿ ಉತ್ತಮ ತೆರಿಗೆ ಸಂಗ್ರಹವಾಗಬೇಕು. ನೀರು, ರಸ್ತೆ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ನೀಡಿದ್ದೇವೆ. ಆದರೆ, ಅನೇಕರು ಇದಕ್ಕೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿಸ್ತೀರ್ಣದ ಹಾಗೂ ಮಹಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಇಂತಹ ಅಕ್ರಮಗಳನ್ನು ʼಎಐʼ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಕಟ್ಟಡವನ್ನು ಎಷ್ಟು ವಿಸ್ತೀರ್ಣ, ಎತ್ತರ ಕಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಜತೆಗೆ ಪ್ರತಿಯೊಂದು ಮನೆಯ ದಾಖಲೆಯೂ ಸಿಗುತ್ತದೆ ಎಂದು ವಿವರಿಸಿದರು.

ಮನೆ, ನಿವೇಶನ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ಕಂದಾಯ ಬಡಾವಣೆ ಅಕ್ರಮಗಳಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಅಂತಹವರನ್ನು ನನ್ನ ಗಮನಕ್ಕೆ ತರದೆಯೂ ಕೂಡಲೇ ಅಮಾನತು ಮಾಡಿ ಎಂದು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇತ್ತೀಚೆಗೆ ಅನೇಕ ದಂಡ ಶುಲ್ಕಗಳ ಮೊತ್ತವನ್ನು ಕೂಡ ಕಡಿಮೆ ಮಾಡಲಾಗಿದೆ. ನಗರದ ವ್ಯಾಪ್ತಿಯ ಎಲ್ಲಾ ಮನೆಗಳು ತೆರಿಗೆ ವ್ಯಾಪ್ತಿಗೆ ಬರಲೇಬೇಕು, ಅವರು ತೆರಿಗೆ ಕಟ್ಟಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ ಎಂದೂ ಎಚ್ಚರಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ರಸ್ತೆಬದಿ ಮಳಿಗೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ನ್ಯಾಯಲಯದ ನಿರ್ದೇಶನವೂ ಇದೆ. ಈಗ ಸುಮಾರು 3,778 ಜನ ತಳ್ಳುವ ಗಾಡಿ ನೀಡಿ ಎಂದು ಅರ್ಜಿ ಹಾಕಿದ್ದಾರೆ. ನಾವು ಈ ವರ್ಷ ಪಾಲಿಕೆಯಿಂದ ಸುಮಾರು 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲು ತಯಾರಿದ್ದೇವೆ. ಗಾಡಿ ಬೇಕಾದವರು ನೋಂದಣಿ ಮಾಡಿಕೊಳ್ಳಬೇಕು. ಗಾಡಿಯನ್ನು ಸುಮ್ಮನೆ ನಿಲ್ಲಿಸಿಕೊಳ್ಳುವಂತಿಲ್ಲ. ಪ್ರತಿದಿನ ಎಲ್ಲಿ, ಯಾವ ಜಾಗದಲ್ಲಿ ವಹಿವಾಟು ನಡೆಸಲಾಯಿತು ಎನ್ನುವ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ. ಗಾಡಿಯನ್ನು ಮನೆಯಲ್ಲಿ ನಿಲ್ಲಿಸಿಕೊಳ್ಳುವುದು, ಮತ್ತೊಬ್ಬರಿಗೆ ಮಾರುವುದಕ್ಕೆ ಅವಕಾಶವಿಲ್ಲ ಎಂದರು.

Also Read

BBMP ಯನ್ನೂ ಬಿಡದ ಮಾಟಮಂತ್ರ: ಅಕ್ರಮ ಕಟ್ಟಡ ನಿರ್ಮಾಣ ತಡೆಯದಂತೆ ಪಾಲಿಕೆ ವಿರುದ್ಧ ಬಿಲ್ಡರ್ ಗಳಿಂದ 'ವಾಮಾಚಾರ'!

ಕಳೆದ ಐದು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಯದ ಬಗ್ಗೆ ಮಾತನಾಡಿ, ಬಿಬಿಎಂಪಿ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲಿಯೇ ನಡೆಸಲು ಸರ್ಕಾರ ತಯಾರಿ ಮಾಡಿಕೊಂಡಿದೆ. ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಇದರ ಬಗ್ಗೆ ವಿಪಕ್ಷಗಳು ಜಂಟಿ ಸದನ ಸಮಿತಿ ರಚಿಸುವಂತೆ ಮನವಿ ಮಾಡಿದ್ದೆವು. ಈಗಾಗಲೇ ಅನೇಕರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ರಾಜ್ಯಪಾಲರು ಎಷ್ಟು ಬೇಗ ಸಹಿ ಹಾಕಿ ಕಳುಹಿಸುತ್ತಾರೋ ಅಷ್ಟು ಬೇಗ ಪ್ರದೇಶಗಳನ್ನು ಗುರುತಿಸಿ, ಶಾಸಕರ ಬಳಿ ಮತ್ತೊಮ್ಮೆ ಚರ್ಚೆಮಾಡಿ ಚುನಾವಣೆಗೆ ತೆರಳುತ್ತೇವೆ. 73, 74ನೇ ತಿದ್ದುಪಡಿ ಬಗ್ಗೆ ನಮಗೆ ಬದ್ಧತೆಯಿದೆ ಎಂದರು.

ಸಭೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments