ಬೆಂಗಳೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಒಂದು ವಾರದಲ್ಲಿ ಸಲ್ಲಿಸುವುದಾಗಿ ತಿಳಿಸಿದ್ದು, ವರದಿ ಸಲ್ಲಿಕೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಿದ್ದಾರೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೋಮವಾರ ಹೇಳಿದರು.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯಲ್ಲಿ ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ್, ಶಿವರಾಜ್ ತಂಗಡಗಿ, ಡಾ. ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸೇರಿದಂತೆ ಎಸ್‌ಸಿ ಸಚಿವರೊಂದಿಗೆ ಸಿಎಂ ತಮ್ಮ ನಿವಾಸದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿದ ನಂತರ, ಕಾಂಗ್ರೆಸ್ ಸರ್ಕಾರ ಆಂತರಿಕ ಮೀಸಲಾತಿ ಜಾರಿಗೆ ತರಲು ಬದ್ಧವಾಗಿದೆ ಎಂದು ಪರಮೇಶ್ವರ್ ಅವರು ಮಾಧ್ಯಮಗಳಿಗೆ ತಿಳಿಸಿದರು.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರಕಾರ ಬದ್ಧವಾಗಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಹೇಳಿದ್ದೇವೆ. ಎಂಪೆರಿಕಲ್ ಡೇಟಾ ನಿರ್ಧಿಷ್ಟವಾದ ಅಭಿಪ್ರಾಯ ಬರುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಭೆಯಲ್ಲಿ ತಿಳಿಸಿದ್ದಾರೆಂದು ಹೇಳಿದರು.
ಸಚಿವ ಡಾ. ಹೆಚ್.ಸಿ.ಮಹದೆವಪ್ಪ ಅವರು ಮಾತನಾಡಿ, ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರ ಜೊತೆ ಸುಧೀರ್ಘ ಸಭೆ ನಡೆಸಲಾಗಿದೆ. ಒಳಮೀಸಲಾತಿ ಜಾರಿಗಾಗಿ ಈವರೆಗೂ ಆಗಿರುವ ಪ್ರಗತಿಯ ಮಾಹಿತಿಯನ್ನು ನಾಗ ಮೋಹನ್ ದಾಸ್ ಸಮಿತಿ ನೀಡಿದೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ಹೇಳಿದರು.
ದತ್ತಾಂಶ ಆಧಾರದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ ನಾಗಮೋಹನ್ ದಾಸ್ ಅವರು ವಾರದೊಳಗೆ ಮಧ್ಯಂತರ ವರದಿ ನೀಡುತ್ತಾರೆ. ಆ ವರದಿ ಮೇಲೆ ಒಳಮೀಸಲಾತಿ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಎಂಪೆರಿಕಲ್ ಡೇಟಾ ಸೇರಿದಂತೆ ಎಲ್ಲ ವಿಷಯಗಳನ್ನು ಚರ್ಚೆ ಮಾಡಿ, ನಮ್ಮ ಗಮನಕ್ಕೆ ತಂದಿದ್ದಾರೆ. ನಾವು ಒಳ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಸರಕಾರದ ಬದ್ಧತೆ. ಯಾವುದೇ ಸಮುದಾಯವೂ ಇಷ್ಟೇ ಶೇಕಡಾ ಮೀಸಲಾತಿ ಕೊಡುವಂತೆ ಬೇಡಿಕೆ ಇಟ್ಟಿಲ್ಲ. ಬಹುತೇಕ ಎಲ್ಲಾ ಇಲಾಖೆಗಳು ದತ್ತಾಂಶ ನೀಡಿವೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಒಳಮೀಸಲಾತಿ ಜಾರಿ ಆಗುವವರೆಗೂ ಬ್ಯಾಕ್‌ಲಾಗ್ ಹುದ್ದೆ, ಮುಂಬಡ್ತಿ, ನೇಮಕಾತಿ ಯಾವುದನ್ನೂ ಮಾಡುವುದಿಲ್ಲ ಎಂದು ಹೇಳಿದರು.