ರಾಯಚೂರು: ಪಟ್ಟಣದ ಪುರಸಭೆಯ ಪೀಠೋಪಕರಣಗಳ ಖರೀದಿಯಲ್ಲಿ ಹಣ ದುರ್ಬಳಕೆ ಹಾಗೂ ಕರ್ತವ್ಯಲೋಪ ಎಸಗಿದ ಆರೋಪ ಹಿನ್ನೆಲೆಯಲ್ಲಿ ಲಿಂಗಸುಗೂರು ಪುರಸಭೆಯ ಹಾಲಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅವರನ್ನು ಜಿಲ್ಲಾಧಿಕಾರಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ರೆಡ್ಡಿ ರಾಯನಗೌಡ ಮಸ್ಕಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ವೇಳೆ ಕಚೇರಿಯ ನೂತನ ಕಟ್ಟಡಕ್ಕೆ ಮೀಸಲಿಟ್ಟ 57 ಲಕ್ಷ ರೂ. ಅನುದಾನವನ್ನು ನಿಯಮ ಉಲ್ಲಂಘಿಸಿ ಕಚೇರಿ ಪೀಠೋಪಕರಣಕ್ಕೆ ಖರೀದಿಗಾಗಿ ಕೆಅರ್‌ಐಡಿಎಲ್ ಸಂಸ್ಥೆಗೆ ಪಾವತಿಸಿದ್ದರು.
ಪಿಠೋಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದ ಬಗ್ಗೆ ದಾಖಲಾದ ದೂರಿನ ಮೇಲೆ ತನಿಖೆ ನಡೆಸಿದ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರೆಡ್ಡಿ ಅವರನ್ನು ಅಮಾನತುಗೊಳಿಸಲು ಆದೇಶಿಸಿದ್ದಾರೆ.
ಪೀಠೋಪಕರಣ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕರವೇ ಅಧ್ಯಕ್ಚ ದುರ್ಗರಾಜ ವಟಗಲ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತನಿಖೆ ನಡೆಸಿದ್ದರು.