ಬೆಂಗಳೂರು: ಮುಖ್ಯಮಂತ್ರಿ, ಸಚಿವರು, ಶಾಸಕರು, ವಿಧಾನಸಭೆ ಸ್ಪೀಕರ್ ಮತ್ತು ಪರಿಷತ್ತಿನ ಅಧ್ಯಕ್ಷರ ವೇತನ ಹೆಚ್ಚಳ ಮತ್ತು ಭತ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಈ ಕುರಿತ ಮಸೂದೆಗಳನ್ನು ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ನಡುವೆ ಸರ್ಕಾರದ ನಡೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಸಮರ್ಥಿಸಿಕೊಂಡಿದ್ದಾರೆ.
ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಮುಚ್ಚಿಡಲು ಏನೂ ಇಲ್ಲ. ಇವು ಹಣಕಾಸು ಮಸೂದೆಗಳಾಗಿದ್ದು, ಅವುಗಳಿಗೆ ಯಾರಿಂದಲೂ ಯಾವುದೇ ಆಕ್ಷೇಪಣೆ ಇರಲಿಲ್ಲ ಎಂದು ಹೇಳಿದರು.
ಮಸೂದೆಗಳನ್ನು ಸಂಪುಟದ ಮುಂದೆ ಇಡಲಾಗಿದ್ದು, ಸಚಿವರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಸಂಸದೀಯ ವ್ಯವಹಾರಗಳ ಇಲಾಖೆಯ ಸಭೆಗಳಲ್ಲಿಯೂ ಮಸೂದೆ ಕುರಿತು ಚರ್ಚೆಸಲಾಗಿದೆ. ಹೀಗಿದ್ದರೂ ಮಸೂದೆಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ನೀವು ಭಾವಿಸುತ್ತೀರಾ?” ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು.
ಸಿಎಂ, ಸಚಿವರು ಮತ್ತು ಶಾಸಕರಿಗೆ ಶೇ. 100 ರಷ್ಟು ವೇತನ ಹೆಚ್ಚಳವನ್ನು ಯಾವ ಆಧಾರದ ಮೇಲೆ ನೀಡಲಾಗಿದೆ ಎಂಬ ಪ್ರಶ್ನಗೆ ಉತ್ತರಿಸಿ, ವೇತನ ಗಾತ್ರವು ಯಾವುದೇ ಸರ್ಕಾರಿ ಕಚೇರಿಗಳಿಗೆ ಹೊಂದಿಕೆಯಾಗುವುದಿಲ್ಲ. ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗಳನ್ನು ಉಭಯ ಸದನಗಳ ಮುಂದೆ ಇಡಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ. ಅದರಂತೆ, ನಾವು ಮಸೂದೆಗಳನ್ನು ಅಂಗೀಕರಿಸಿದ್ದೇವೆ. ನಾನು ನಿಮ್ಮ ಪ್ರಶ್ನೆಗಳಿಗಷ್ಟೇ ಉತ್ತರಿಸಬಲ್ಲೆ. ಈ ವಿಷಯದ ಬಗ್ಗೆ ನಿಮ್ಮೊಂದಿಗೆ ವಾದಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇತ್ತೀಚಿನ ಅಧಿವೇಶನದಲ್ಲಿ ಸರ್ಕಾರವು 28 ಮಸೂದೆಗಳನ್ನು ಮಂಡಿಸಿದ್ದು, ಎಲ್ಲವನ್ನೂ ಅಂಗೀಕರಿಸಲಾಗಿದೆ. ಅವುಗಳಲ್ಲಿ ಐದು ರಾಜ್ಯಪಾಲರ ಅನುಮೋದನೆ ಪಡೆದಿವೆ. 2023 ರಲ್ಲಿ, ಸರ್ಕಾರವು 17 ಮಸೂದೆಗಳನ್ನು ಅಂಗೀಕರಿಸಿತ್ತು. 2024 ಮತ್ತು 2025 ರಲ್ಲಿ, ಕ್ರಮವಾಗಿ 47 ಮತ್ತು 19 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಅವುಗಳಲ್ಲಿ 83 ಮಸೂದೆಗಳನ್ನು ಗೆಜೆಟ್ ಮಾಡಲಾಗಿದೆ. ನಾಲ್ಕು ಮಸೂದೆಗಳು ರಾಜ್ಯಪಾಲರ ಅನುಮೋದನೆಗಾಗಿ ಕಾಯುತ್ತಿವೆ, ಏಳು ಮಸೂದೆಗಳನ್ನು ಸ್ಪಷ್ಟೀಕರಣಕ್ಕಾಗಿ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ ಮತ್ತು ಐದು ರಾಷ್ಟ್ರಪತಿಗಳ ಮುಂದೆ ಇವೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಮಸೂದೆಯನ್ನು ವಿಧಾನಸಭೆಯಲ್ಲಿ ಆತುರದಿಂದ ಅಂಗೀಕರಿಸಲಾಗಿಲ್ಲ. ಅಂಗೀಕಾರವಾಗುವ 10 ದಿನಗಳ ಮೊದಲು ಇದನ್ನು ಮಂಡಿಸಲಾಯಿತು. ನಾಗರಿಕ ಕೆಲಸಗಳಿಗಾಗಿ ಸರ್ಕಾರಿ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಲು ಕೆಟಿಪಿಪಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ 18 ಬಿಜೆಪಿ ಶಾಸಕರ ಅಮಾನತು ಬಗ್ಗೆ ಗುರುವಾರ ಸಂಪುಟ ಸಭೆ ಚರ್ಚಿಸುವ ನಿರೀಕ್ಷೆಯಿದೆ ಎಂದು ಪಾಟೀಲ್ ಅವರು ಹೇಳಿದರು.