ಬೆಳಗಾವಿ: ಏ.10ರೊಳಗೆ ಬಸನಗೌಡ ಪಾಟೀಲd ಯತ್ನಾಳ್ ಅವರ ಉಚ್ಚಾಟನೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಏ.13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಶಿಸ್ತುಪಾಲನಾ ಸಮಿತಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಕ್ರಮ ಖಂಡಿಸಿ ಬೆಳಗಾವಿಯ ಗಾಂಧಿ ಭವನದಲ್ಲಿ ಇಂದು ಪಂಚಮಸಾಲಿ ಮುಖಂಡರು ಗುರುವಾರ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ "ಹಿಂದುತ್ವ ಪರ" ಮತ್ತು "ಅಭಿವೃದ್ಧಿ ಪರ" ನಾಯಕರನ್ನು ನಿಗ್ರಹಿಸುವ ಪಿತೂರಿ ಇದಾಗಿದೆ ಎಂದು ಕಿಡಿಕಾರಿದರು,
ಮೀಸಲಾತಿ ಹೋರಾಟದ ರಾಷ್ಟ್ರೀಯ ಅಧ್ಯಕ್ಷ, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳರನ್ನು ಉಚ್ಚಾಟಿಸಿದ್ದಾರೆ. ಬಿ ಎಸ್ ಯಡಿಯೂರಪ್ಪ, ಬಿ ವೈ ವಿಜಯೇಂದ್ರ ಕುತಂತ್ರದಿಂದ ಉಚ್ಚಾಟನೆ ಮಾಡಲಾಗಿದೆ. ಇದನ್ನು ಇಡೀ ಪಂಚಮಸಾಲಿ ಸಮುದಾಯ ಖಂಡಿಸುತ್ತದೆ ಎಂದು ಹೇಳಿದರು.
ಲಿಂಗಾಯತ ಸಮುದಾಯ ಕಡೆಗಣಿಸಿ ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಎಸ್. ನಿಜಲಿಂಗಪ್ಪ, ವಿರೇಂದ್ರ ಪಾಟೀಲ ಅವರ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಜನತಾದಳ ಇಬ್ಭಾಗ ಆದಾಗ ನಮ್ಮ ಸಮಾಜ ಯಡಿಯೂರಪ್ಪರ ಬೆನ್ನಿಗೆ ನಿಂತಿತ್ತು. ಆದರೆ, ಇದೇ ಯಡಿಯೂರಪ್ಪ ನಮ್ಮ ಸಮಾಜದ ಮೀಸಲಾತಿ ಹೋರಾಟ ಹತ್ತಿಕ್ಕಿದ್ದರು. ಈಗ ಯತ್ನಾಳ್ ಲಿಂಗಾಯತ ನಾಯಕರಾಗಿ ಹೊಮ್ಮುತ್ತಿದ್ದರು. ಇಂಥ ಸಂದರ್ಭದಲ್ಲಿ ಕುತಂತ್ರ ಮಾಡಿ ಅವರನ್ನು ಉಚ್ಚಾಟಿಸಿದ್ದಾರೆ.
ಯತ್ನಾಳ್ ಬೆನ್ನಿಗೆ ಕೇವಲ ಪಂಚಮಸಾಲಿ ಅಷ್ಟೇ ಅಲ್ಲ, ಹಲವು ಸಮುದಾಯಗಳ ಜನರಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮ್ಮ ಸಮಾಜ ಬಿಟ್ಟು ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂಬುದು ನಿಮ್ಮ ಭ್ರಮೆ. ಮೀಸಲಾತಿ ಹೋರಾಟ ಹತ್ತಿಕ್ಕುವ ಕೆಲಸವನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿತ್ತು. ಅದಕ್ಕಾಗಿ ನಮ್ಮ ಸಮಾಜ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತಿತ್ತು. ಆದರೆ, ಈ ಸರ್ಕಾರ ನಮಗೆ ಮೀಸಲಾತಿ ನೀಡದೇ ಲಾಠಿ ಚಾರ್ಜ್ ಮಾಡಿಸಿತು. ಹೀಗಾಗಿ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ, ಸಿಎಂ ಆಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ಕುತಂತ್ರದಿಂದ ಏಕಾಏಕಿ ಯತ್ನಾಳರನ್ನು ಉಚ್ಚಾಟನೆ ಮಾಡಲಾಗಿದೆ.
ಮೀಸಲಾತಿ ಕೊಡದಿದ್ದಕ್ಕೆ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಕ್ಕೆ ಕುಸಿಯಿತು. ಇನ್ನು ಪಂಚಮಸಾಲಿ ಸಮಾಜದ ನಾಯಕನನ್ನು ಉಚ್ಚಾಟನೆ ಮಾಡಿರುವ ಬಿಜೆಪಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಏ.10ರೊಳಗೆ ಉಚ್ಚಾಟನೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಪಂಚಮಸಾಲಿ ಬಂಧುಗಳು, ಹಿಂದೂಪರ ಕಾರ್ಯಕರ್ತರು, ಯತ್ನಾಳ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿಕೊಂಡರು,
ಮಾಧ್ಯಮಗೋಷ್ಟಿಯಲ್ಲಿ ಪಂಚಮಸಾಲಿ ಮುಖಂಡರಾದ ಶಶಿಕಾಂತ ಪಡಸಲಗಿ, ರಮೇಶಗೌಡ ಪಾಟೀಲ, ಆರ್.ಸಿ. ಪಾಟೀಲ, ಗುಂಡು ಪಾಟೀಲ, ಶಿವಾನಂದ ತಂಬಾಕಿ ಸೇರಿ ಮತ್ತಿತರರು ಇದ್ದರು.