ಗಾಯಕ ಸೋನು ನಿಗಮ್ 
ರಾಜ್ಯ

ಕನ್ನಡಿಗರು, ಕನ್ನಡ ಭಾಷೆಗೆ ಅವಮಾನ: ಗಾಯಕ ಸೋನು ನಿಗಮ್ ವಿರುದ್ಧ ವ್ಯಾಪಕ ಆಕ್ರೋಶ, ಸಮನ್ಸ್ ಜಾರಿಗೆ ಪೊಲೀಸರು ಮುಂದು!

ಬೆಂಗಳೂರಿನ ಕಾಲೇಜು ಒಂದರಲ್ಲಿ ನಡೆದ ಈವೆಂಟ್ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ‘ಕನ್ನಡ ಹಾಡು ವಿನಂತಿ ಮಾಡಿದಕ್ಕೆ ಪಹಲ್ಲಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ ಎಂದಿದ್ದರು.

ಬೆಂಗಳೂರು: ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್‌ ಉಗ್ರರ ದಾಳಿಗೆ ಹೋಲಿಸಿ ಅವಹೇಳನಕಾರಿಯಾಗಿ ಮಾತನಾಡಿದ ಗಾಯಕ ಸೋನು ನಿಗಮ್‌ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ ಗಾಯಕನಿಗೆ ಸಮನ್ಸ್ ಜಾರಿ ಮಾಡಲು ಪೊಲೀಸರು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನ ಕಾಲೇಜು ಒಂದರಲ್ಲಿ ನಡೆದ ಈವೆಂಟ್ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ‘ಕನ್ನಡ ಹಾಡು ವಿನಂತಿ ಮಾಡಿದಕ್ಕೆ ಪಹಲ್ಲಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ತನಿಖಾ ಅಧಿಕಾರಿ (ಐಒ) ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಆವಲಹಳ್ಳಿ ಪೊಲೀಸರು ಗಾಯಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 351(1) (ಕ್ರಿಮಿನಲ್ ಬೆದರಿಕೆ), 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು 353 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ ಅವರು ದೂರು ನೀಡಿದ್ದು, ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಸೋನು ನಿಗಮ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರು ದಾಖಲಾದ ಬೆನ್ನಲ್ಲೇ ಸೋನು ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

ಲೈವ್‌ ಕಾನ್ಸರ್ಟ್‌ನಲ್ಲಿ ಹಾಡುವಾಗ ಅಲ್ಲಿ ನಾಲ್ಕೈದು ಜನ ಗೂಂಡಗಳ ಥರ ಇದ್ದರು. ಧಮ್ಕಿ ಹಾಕಿ ಕನ್ನಡ ಹಾಡಿ ಎಂದು ಕೂಗುತ್ತಿದ್ದರು. ಅಕ್ಕಪಕ್ಕ ಇದ್ದ ಜನ ಹೀಗೆ ಕೂಗಬೇಡಿ ಎಂದರು. ಪಹಲ್ಗಾಮ್‌ನಲ್ಲಿ ಪ್ಯಾಂಟ್ ಬಿಚ್ಚಿಸಿದ್ರಲ್ಲ, ಆಗ ಅವರು ಭಾಷೆ ಕೇಳಿರಲಿಲ್ಲ. ಅದನ್ನು ಈ ನಾಲ್ಕೈದು ಜನರಿಗೆ ಹೇಳುವುದು ಮುಖ್ಯವಾಗಿತ್ತು. ಕನ್ನಡಿಗರು ತುಂಬಾ ಒಳ್ಳೆಯವರು. ನೀವು ಕಮೆಂಟ್‌ನಲ್ಲಿ ಬಂದು ಬೇರೆ ರೀತಿಯಲ್ಲಿ ಯೋಚಿಸಬೇಡಿ.

ಒಂದು ಗಂಟೆಗೆ ಬೇಕಾಗುವಷ್ಟು ಕನ್ನಡ ಹಾಡುಗಳನ್ನು ಸೆಟ್ ಮಾಡಿಕೊಂಡು ಬರುತ್ತೇನೆ. ಅದನ್ನು ನಾನು ತುಂಬ ಸಲ ಸ್ಟೇಜ್ ಮೇಲೂ ಹೇಳಿದ್ದೇನೆ. ಆದರೆ, ಜನರು ಈ ರೀತಿ ಮಾಡಿದಾಗ ಅಲ್ಲೇ ಅವರನ್ನು ತಡೆಯಬೇಕಾಗುತ್ತದೆ. ಕನ್ನಡಿಗರು ತುಂಬಾ ಒಳ್ಳೆಯವರು, ಇದನ್ನು ಜನರಲೈಸ್ ಮಾಡಬೇಡಿ ಎಂದು ಹೇಳಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಮಾತನಾಡಿ, ಸೋನು ನಿಗಮ್ ಅವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸೋನು ನಿಗಮ್ ಬಗ್ಗೆ ಕನ್ನಡಿಗರು ಯಾವಾಗಲೂ ಅಪಾರ ಪ್ರೀತಿ ಮತ್ತು ಗೌರವವನ್ನು ತೋರಿಸಿದ್ದಾರೆ. "ಇಲ್ಲಿ ಬೇರೆ ಯಾವುದೇ ಕಲಾವಿದರಿಗೆ ಅಂತಹ ಮೆಚ್ಚುಗೆ ಸಿಕ್ಕಿಲ್ಲ. ಅವರು ಕನ್ನಡಿಗರ ಬಗ್ಗೆ ಅದೇ ರೀತಿಯ ಪ್ರೀತಿ ಮತ್ತು ಸೂಕ್ಷ್ಮತೆಯನ್ನು ತೋರಿಸುತ್ತಾರೆಂತು ನಿರೀಕ್ಷಿಸಿದ್ದವು. ಆದರೆ, ಅವರು, ಕನ್ನಡಾಭಿಮಾನದಿಂದ ಕಾರ್ಯಕ್ರಮದಲ್ಲಿ ಗಾಯಕನಿಂದ ಕನ್ನಡ ಹಾಡು ಕೇಳಲು ಮುಂದಾದ ಕನ್ನಡಿಗರನ್ನು ಉಗ್ರರಿಗೆ ಹೋಲಿಸಿ ಅವಹೇಳನ ಮಾಡುವುದು ಎಷ್ಟು ಸಮಂಜಸ? ಇದನ್ನು ನಾವು ಸಹಿಸಲು ಸಾಧ್ಯವಿಲ್ಲ, ಈಗಾಗಲೇ ಅವರ ವಿರುದ್ಧ ದೂರು ನೀಡಿದ್ದೇವೆ. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೇವಲ ಅವರು ಪಶ್ಚಾತ್ತಾಪಪಟ್ಟು ಕ್ಷಮೆ ಕೇಳಿದರೆ ಸಾಲದು, ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲೇಬೇಕೆಂಬುದು ನಮ್ಮ ಒತ್ತಾಯ. ಕನ್ನಡದ ಬಗ್ಗೆ ಕೀಳಾಗಿ ಮಾತನಾಡುವವರಿಗೆ, ಕನ್ನಡಿಗರಿಗೆ ಅವಮಾನ ಮಾಡುವವರಿಗೆ ಸೋನು ನಿಗಮ್ ಅವರ ವಿರುದ್ಧ ಕೈಗೊಳ್ಳುವ ಕ್ರಮ ಎಚ್ಚರಿಕೆ ಘಂಟೆಯಾಗಬೇಕು. ಕನ್ನಡಿಗರಿಗೆ ಹೃದಯ ಶ್ರೀಮಂತಿಕೆ ಇದೆ. ಎಲ್ಲರನ್ನೂ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಗುಣವಿದೆ. ಅದು ನಮ್ಮ ದೌರ್ಬಲ್ಯವಲ್ಲ, ಪರಭಾಷಿಗರು, ವಲಸಿಗರು ನಮ್ಮ ಅತಿಯಾದ ಒಳ್ಳೆಯತನವನ್ನು ದುರ್ಬಳಕೆ ಮಾಡಿ ಕೊಂಡು ಕೆಣಕಿದರೆ, ಅವಮಾನ ಮಾಡಿದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ನಿರ್ಮಾಪಕರು, ನಿರ್ದೇಶಕರಿಗೂ ನಾನು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ಸೋನು ನಿಗಂ ಹಾಡಿರುವ ಚಿತ್ರಗಳನ್ನು ತೆರೆ ಕಾಣಲು ಬಿಡುವುದಿಲ್ಲ. ನಾವು ಇಂತವರಿಗೆ ಸರಿಯಾಗಿ ಪಾಠ ಕಲಿಸದಿದ್ದರೆ ಕನ್ನಡ ಭಾಷೆಗೆ, ಸಂಸ್ಕೃತಿಗೆ, ಕನ್ನಡಿಗರಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT