ಬೆಂಗಳೂರು: ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿದ್ದು, ಇದಾದ ಬಳಿಕ ಜೀವ ಬೆದರಿಕೆ ಬಂದಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಫ್ಯಾಕ್ಟ್ ಚೆಕ್ಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಹೇಳಿದ್ದಾರೆ.
ಆದಾಗ್ಯೂ, ಈ ಸಂಬಂಧ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 'X' ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರು ತಮ್ಮ ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡಿದ್ದಾರೆ. ಬಳಿಕ ನಮ್ಮ ಮನೆ ವಿಳಾಸಕ್ಕೆ ಹಂದಿ ಮಾಂಸ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
'ನನ್ನ ವಿರುದ್ಧ ಈಗಾಗಲೇ ಜೀವ ಬೆದರಿಕೆಗಳಿವೆ. ಇದು ಮೊದಲ ಬಾರಿಗೆ ಅಲ್ಲ. 2023ರಲ್ಲಿಯೂ ಅದೇ ವ್ಯಕ್ತಿ ನನ್ನ ವಿಳಾಸಕ್ಕೆ ಹಂದಿ ಮಾಂಸ ಕಳುಹಿಸಿದ್ದ ಮತ್ತು ಟ್ವಿಟರ್‌ನಲ್ಲಿ ಶಿಪ್ಪಿಂಗ್ ವಿಳಾಸವನ್ನು ಹಂಚಿಕೊಂಡಿದ್ದ. ನಾನು ಪೊಲೀಸರಿಗೆ ದೂರು ದಾಖಲಿಸಿದ್ದೇನೆ. ಪೂರ್ವ ವಿಭಾಗದ ಡಿಸಿಪಿ, ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಡಿಜಿಪಿ ಈ ಬೆದರಿಕೆಯನ್ನು ಈ ಬಾರಿಯಾದರೂ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಂಬಿದ್ದೇನೆ' ಎಂದು ಅವರು ತಮ್ಮ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ಬಾರಿ ಕೂಡ ಇದೇ ರೀತಿಯ ದೂರು ದಾಖಲಿಸಿದಾಗ, ಕೆಲವು ತಿಂಗಳುಗಳ ನಂತರ ಎಫ್‌ಐಆರ್ ಅನ್ನು ರದ್ದುಗೊಳಿಸಲಾಯಿತು ಎಂದಿದ್ದಾರೆ.
ತಮ್ಮ ವೈಯಕ್ತಿಕ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸೋರಿಕೆ ಮಾಡಿದ ಹ್ಯಾಂಡಲ್‌ಗಳನ್ನು ಸಹ ಹಂಚಿಕೊಂಡಿದ್ದು, 'ಆ ವಿಳಾಸದಲ್ಲಿ ವಾಸಿಸುತ್ತಿರುವ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಇದೆ' ಎಂದಿದ್ದಾರೆ.
'ಈ ಸಂಬಂಧ ಅವರಿಂದ ನಮಗೆ ದೂರು ಬಂದಿದೆ. ಆದರೆ, ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ದೂರನ್ನು ಆರ್‌ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ವರ್ಗಾಯಿಸಲಾಗುತ್ತಿದ್ದು, ಅವರು ಅಲ್ಲೇ ವಾಸಿಸುತ್ತಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.