ಬೆಂಗಳೂರು: ಹಿಂದಿನ ಎರಡು ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇಕಡಾ 30ರಷ್ಟು ಇಳಿಕೆ ಕಂಡುಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಶೇ.30ರಷ್ಟು ಇಳಿಕೆಯಾಗಿದ್ದು, ಇದರ ಜೊತೆಗೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಪ್ರಕರಣಗಳಲ್ಲಿ ಶೇಕಡಾ 12 ರಷ್ಟು ಮತ್ತು ಆಸ್ತಿ ಸಂಬಂಧಿತ ಅಪರಾಧಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಹೇಳಿದರು.
2023 ರ ಮೊದಲ ಮೂರು ತಿಂಗಳಲ್ಲಿ ನಗರದಲ್ಲಿ 3,588 ಸೈಬರ್ ಅಪರಾಧ ಪ್ರಕರಣಗಳು, 2024 ರಲ್ಲಿ 4,679 ಪ್ರಕರಣಗಳು ದಾಖಲಾಗಿದ್ದವ. 2025 ರಲ್ಲಿ 2,838 ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಗಂಭೀರ ಅಪರಾಧಗಳು ಮತ್ತು ಆಸ್ತಿ ಅಪರಾಧಗಳು ಕೂಡ ಕಡಿಮೆಯಾಗಿವೆ, ದರೋಡೆ ಪ್ರಕರಣಗಳಲ್ಲಿ ಶೇಕಡಾ 73 ರಷ್ಟು, ಡಕಾಯಿತಿಗಳಲ್ಲಿ ಶೇಕಡಾ 71 ರಷ್ಟು ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಶೇಕಡಾ 57 ರಷ್ಟು ಇಳಿಕೆಯಾಗಿದೆ.
ಜಾಗೃತಿ ಅಭಿಯಾನಗಳಿಂದಾಗಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. OTP ಮತ್ತು KYC ವಂಚನೆ ಪ್ರಕರಣಗಳೂ ಕೂಡ ಕಡಿಮೆಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಆನ್‌ಲೈನ್ ಪೊಲೀಸ್ ಅಭಿಯಾನಗಳ ಬೃಹತ್ ಜಾಗೃತಿ ಅಭಿಯಾನಗಳ ಕಳೆದ ವರ್ಷ ಭೀತಿಯನ್ನುಂಟುಮಾಡಿದ್ದ ಡಿಜಿಟಲ್ ಅರೆಸ್ಟ್ ಮತ್ತು ಫೆಡ್‌ಎಕ್ಸ್ ವಂಚನೆಗಳೂ ಕೂಡ ಇಳಿಕೆ ಕಂಡಿವೆ.
ಅಪರಾಧ ದರಗಳಲ್ಲಿನ ಒಟ್ಟಾರೆ ಕುಸಿತಕ್ಕೆ ಸುಧಾರಿತ ಪೊಲೀಸ್ ತಂತ್ರಗಳು, ಪ್ರಮುಖ ನಗರ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕ ಸುರಕ್ಷತಾ ಜಾಗೃತಿ ಉಪಕ್ರಮಗಳು ಕಾರಣವಾಗಿವೆ ಎಂದು ತಿಳಿಸಿದ್ದಾರೆ