ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ 
ರಾಜ್ಯ

'ಆಪರೇಷನ್ ಸಿಂಧೂರ್ ಬೂಟಾಟಿಕೆ': ಕಾಂಗ್ರೆಸ್ ಶಾಸಕನ ವಿರುದ್ಧ ದೂರು ದಾಖಲು; BJP-JDS ವಾಗ್ದಾಳಿ

ಕೊತ್ತೂರು ಮಂಜುನಾಥ್ ಹೇಳಿಕೆ, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ. ಕಾಂಗ್ರೆಸ್ ಪಕ್ಷದಿಂದ ಕೊತ್ತೂರು ಮಂಜುನಾಥ್ ವಜಾಗೊಳಿಸಲು ಬಿಜೆಪಿ ಒತ್ತಾಯಿಸಿದೆ.

ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಬೂಟಾಟಿಕೆ ಎಂಬ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಶುಕ್ರವಾರ ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಂಜುನಾಥ್ ಅವರು, ಸಾಮಾನ್ಯ ಪ್ರಜೆಗಳ ಮೇಲೆ ಯುದ್ದ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ, ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯರನ್ನು ಸಾಯಿಸಿದರೆ ಹೇಗೆ ಸಹಿಸುವುದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರುವುದಕ್ಕೆ ಪರವಾಗಿಲ್ಲ. ಇಲ್ಲಾ ಅಂದರೆ ಹೃದಯಾಘಾತದಿಂದ ಆಗಿ ಸಾಯುತ್ತಿದ್ದರು. ಅಂತಹದಕ್ಕೆ ಪರಿಹಾರ ಇದಲ್ಲ. ಬೇರಿನಿಂದ ಕೊಂಬೆ ತನಕ ಎಲ್ಲವನ್ನೂ ಹೊಡೆಯಬೇಕು. ಈ ಬಾರಿ ಒಳ್ಳೆಯ ಅವಕಾಶ ಇತ್ತು. ಆದರೆ ಏನೂ ಮಾಡಿಲ್ಲ ಎಂಬುದು ಬೇಸರ ತಂದಿದೆ ಎಂದು ಹೇಳಿದ್ದರು.

ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿದ್ದು ಅದರಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ಎಲ್ಲೂ ದೃಢಪಟ್ಟಿಲ್ಲ ಎಂದು ಆಪರೇಷನ್ ಸಿಂಧೂರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ್ಯ ಓಂ ಶಕ್ತಿ ಚಲಪತಿ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್ ಶಾಸಕನ ವಿರುದ್ಧ ದೂರು ಸಲ್ಲಿಸಿದ್ದಾರೆ.

ಕೋಲಾರ ಎಸ್ಪಿ ಕಚೇರಿಗೆ ಆಗಮಿಸಿದ ಅವರು, ಎಸ್ಪಿ ಬಿ ನಿಖಿಲ್ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೂಡಲೇ ಶಾಸಕ ಕೊತ್ತೂರು ಮಂಜುನಾಥ್ ಬಂಧನಕ್ಕೆ ಜಿಲ್ಲಾಧ್ಯಕ್ಷ್ಯ ಓಂ ಶಕ್ತಿ ಚಲಪತಿ ಒತ್ತಾಯಿಸಿದ್ದಾರೆ.

ಕೊತ್ತೂರು ಮಂಜುನಾಥ್ ಹೇಳಿಕೆ, ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ. ಕಾಂಗ್ರೆಸ್ ಪಕ್ಷದಿಂದ ಕೊತ್ತೂರು ಮಂಜುನಾಥ್ ವಜಾಗೊಳಿಸಲು ಬಿಜೆಪಿ ಒತ್ತಾಯಿಸಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಟೀಕಿಸಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಯುದ್ಧದ ಅಗತ್ಯವಿಲ್ಲ” ಎಂಬ ಹೇಳಿಕೆ ನೀಡಿ ಪಾಕಿಸ್ತಾನ ಮಾಧ್ಯಮದಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ನಂತರ, ಮತ್ತೊಬ್ಬ ಕಾಂಗ್ರಸ್ ನಾಯಕ ಪಾಕಿಸ್ತಾನ ಮಾಧ್ಯಮದಲ್ಲಿ ಸ್ಟಾರ್ ಆಗಲು ಉತ್ಸುಕರಾಗಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಶಾಸಕರು ಆಪರೇಷನ್ ಸಿಂಧೂರ್ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿ, ನಮ್ಮ ಸಶಸ್ತ್ರ ಪಡೆಗಳನ್ನು ಅವಮಾನಿಸುವುದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ಪೋಸ್ಟ್ ಮಾಡಿ, ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದರೇ, ಪ್ರತಿ ಬಾರಿಯೂ ಕಾಂಗ್ರೆಸ್ಸಿಗರು ಸಾಕ್ಷಿ ಕೇಳಿ, ಸೇನೆಗೆ ಅವಮಾನ ಮಾಡುತ್ತಲೇ ಇದ್ದಾರೆ. "ಆಪರೇಷನ್‌ ಸಿಂಧೂರ" ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರ ಶೌರ್ಯ, ಪ್ರರಾಕ್ರಮವನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡುತ್ತಿದೆ.ಕಾಂಗ್ರೆಸ್ಸಿಗರು ಮಾತ್ರ ಸಾಕ್ಷಿ ಕೇಳುತ್ತಾ, ನೀಚ ಬುದ್ಧಿ, ಕೀಳು ಅಭಿರುಚಿಯನ್ನು ಪ್ರದರ್ಶಿಸುತ್ತಿರುವುದು ದುರಂತ ಎಂದು ಕಿಡಿಕಾರಿದೆ.

ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ಪಹಲ್ಗಾಮ್'ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಪೈಶಾಚಿಕ ಭಯೋತ್ಪಾದಕ ದಾಳಿ ಮತ್ತು ಉಗ್ರರಿಗೆ ಪಾಕಿಸ್ತಾನದ ಚಿತಾವಣಿಯಷ್ಟೇ ಅಲ್ಲದೇ ತನ್ನ ತನು-ಮನ-ಧನ ಅರ್ಪಣೆ ಮಾಡುತ್ತಿರುವುದನ್ನು ಖಂಡಿಸುವ ಬದಲಿಗೆ ಕಾಂಗ್ರೆಸ್ ಪಕ್ಷವು ಸೇನಾಪಡೆಗಳನ್ನು, ಪ್ರಧಾನಿ ಮೋದಿ ಅವರನ್ನೂ ನಿಂದಿಸುತ್ತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್, ಭಾರತದ ರಾಜಕೀಯ ಪಕ್ಷವೋ? ಅಥವಾ ಶತ್ರು ದೇಶದ ವಕ್ತಾರಿಕೆ ಮಾಡುತ್ತಿರುವ ಪಕ್ಷವೋ? ಅದರ ತನ್ನ DNA ಭಾರತದ್ದೋ..? ಅಥವಾ ಪಾಕಿಸ್ತಾನದ್ದೋ..? ಎಂಬುದನ್ನು ಅದುವೇ ಸ್ಪಷ್ಟಪಡಿಸಬೇಕು. ಪಾಕಿಸ್ತಾನ ಸೃಷ್ಟಿಯಾಗಿದ್ದು ಹೇಗೆ? ಅದರಲ್ಲಿ ಕಾಂಗ್ರೆಸ್ ಪಾತ್ರವೇನು? ಎಂಬ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಆದರೆ, ದೇಶ ವಿಭಜನೆಯಾಗಿ ಏಳೂವರೆ ದಶಕ ಮೀರಿದರೂ ಆ ಪಕ್ಷ ಇನ್ನೂ ಪಾಕಿಸ್ತಾನ್ ಮನಃಸ್ಥಿತಿಯಲ್ಲೇ ಇದೆ. ಅಸ್ತಿತ್ವ ಭಾರತದಲ್ಲಿ, ಅದರ ಹೃದಯ ಮಾತ್ರ ಪಾಕಿಸ್ತಾನದಲ್ಲಿ!! ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ.

ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಕಾಂಗ್ರೆಸ್ ಪಕ್ಷದ ಅಂತರಾತ್ಮದ ದನಿ. ಆಚಾರವಿಲ್ಲದ ನಾಲಿಗೆ.. ಆಪರೇಷನ್ ಸಿಂದೂರ್ ಬೂಟಾಟಿಕೆಯಂತೆ! ಇಡೀ ರಾಷ್ಟ್ರದ ಹೆಮ್ಮೆಯಾಗಿರುವ ಈ ಯಶಸ್ವಿ ಕಾರ್ಯಾಚರಣೆ ವಿರಾಟ್ ಸ್ವರೂಪವನ್ನು ಖುದ್ದು ನೋಡಬೇಕೆ ಮಂಜುನಾಥ್..? ಹಾಗಿದ್ದರೆ ಬನ್ನಿ, ನಿಮ್ಮನ್ನು ಪಾಕಿಸ್ತಾನಕ್ಕೆ ಕಳಿಸಿ ಕೊಡುತ್ತೇವೆ. ಭಾರತೀಯ ಸೇನೆಯ ಪರಾಕ್ರಮವನ್ನು ಖುದ್ದು ನೋಡಿಕೊಂಡು ಬರುವಿರಂತೆ. ಹೋಗುವಿರಾ ಪಾಕಿಸ್ತಾನಕ್ಕೆ..?

ಆಯೋಗಕ್ಕೆ ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಜನತೆಗೆ ಟೋಪಿ ಹಾಕಿ ಚುನಾವಣೆ ಗೆದ್ದಿದ್ದ ಈ ಕಿಡಿಗೇಡಿ ಕಾಂಗ್ರೆಸ್ ಶಾಸಕ, ತನ್ನೊಳಗಿದ್ದ ವಿಷವನ್ನೇ ಕಕ್ಕಿಕೊಂಡಿದ್ದಾರೆ. ಅಂಥ ವಿಷಕಾರಿ DNA ಉಳ್ಳ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಪ್ರೇಮವಿರಲು ಸಾಧ್ಯವೇ..? ಆಪರೇಷನ್ ಸಿಂದೂರ್ ನಂತರ ಸೀನಿಯರ್ ಖರ್ಗೆ, ಜ್ಯೂನಿಯರ್ ಖರ್ಗೆ, ರಾಹುಲ್ ಗಾಂಧಿ ಸೇರಿ ಕರ್ನಾಟಕದ ಸೋ ಕಾಲ್ಡ್ ಕಾಂಗ್ರೆಸ್ ನಾಯಕರ ಆಣಿಮುತ್ತುಗಳನ್ನು ಗಮನಿಸಿದರೆ ಅವರ ಪ್ರೇಮ ಯಾವ ರಾಷ್ಟ್ರದ ಮೇಲೆ ಎಂದು ತಿಳಿಯುತ್ತದೆ!

ಹಾಗೆಯೇ; ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಅವರ ಹೇಳಿಕೆಗಳನ್ನೂ ದೇಶ ಗಮನಿಸಿದೆ. ರಾಷ್ಟ್ರದ ಬಗ್ಗೆ ಅವರಿಗಿರುವ ಬದ್ಧತೆ, ಆಚಲತೆಯನ್ನು ನೋಡಿದೆ, ಕೊಂಡಾಡಿದೆ. ರಾಷ್ಟ್ರ ದ್ರೋಹ ಮತ್ತು ರಾಷ್ಟ್ರಪ್ರೇಮಕ್ಕೆ ಇರುವ ವ್ಯತ್ಯಾಸವಿದು. ರಾಷ್ಟ್ರ ನಿಂದನೆ, ಸೇನೆಯ ನಿಂದನೆ ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಜನ್ಮತಃ ಅಂಟಿರುವ ಜಾಡ್ಯ. ಪಾಕಿಸ್ತಾನ್ ನ್ಯಾಶನಲ್ ಕಾಂಗ್ರೆಸ್ ಪಾರ್ಟಿಯಾಗಿ ರೂಪಾಂತರಗೊಂಡಿರುವ ಆ ಪಕ್ಷದ ಅಸಲಿ ಅಜೆಂಡಾ ಏನು? ಹಿಡೆನ್ ಹಿಡೆನ್ ಏನೆಲ್ಲಾ ಮಾಡುತ್ತಿದೆ..!? ಇದು ನನ್ನ ಮೂಲಭೂತ ಪ್ರಶ್ನೆ ಎಂದು ತಿಳಿಸಿದ್ದಾರೆ.

ಯೂಟರ್ನ್ ಹೊಡೆದ ಶಾಸಕ

ಈ ನಡುವೆ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್ ಶಾಸಕ ಯೂಟರ್ನ್ ಹೊಡೆದಿದ್ದಾರೆ.

ಅಪರೇಷನ್ ಸಿಂಧೂರ, ಸೇನೆ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೆ, ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಾಧಾನ ತಂದಿಲ್ಲ. ಕಾರ್ಯಾಚರಣೆ ಆರಂಭಿಸಿ, ಮೊಟಕುಗೊಳಿಸಿದ್ದು ನಿರಾಸೆ ತರಿಸಿದೆ. ಪಹಲ್ಗಾಮ್ ನಲ್ಲಿ ಬಂದು ನಮ್ಮ ಹಣ್ಣು ಮಕ್ಕಳ ಮುಂದೆ ದಾಳಿ ಮಾಡ್ತಾರೆ ಎಂದ್ರೆ ಹೇಗೆ? ಭಾರತ‌‌ ಶಕ್ತಿಶಾಲಿ ದೇಶವಿದ್ದರು, ಪದೆ ಪದೇ ದಾಳಿಗಳಾಗುತ್ತವೆ ಅಂದ್ರೆ ಹೇಗೆ ಸಾಧ್ಯ ಅಂತ ಅನುಮಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT