ಬೆಳಗಾವಿ: ಬೆಳಗಾವಿಯಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿಗೆ ಅನುಕೂಲಕರ ತಪಾಸಣಾ ವರದಿ ನೀಡಲು 10 ಲಕ್ಷ ರೂ. ಲಂಚ ಪಡೆಯುತ್ತಿದ್ದ ರಾಷ್ಟ್ರೀಯ ವೈದ್ಯಕೀಯ ಆಯೋಗದ(ಎನ್‌ಎಂಸಿ) ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ವೈದ್ಯರನ್ನು ಸಿಬಿಐ ಬಂಧಿಸಿದೆ.
ಎನ್‌ಎಂಸಿ ವೈದ್ಯರ ಬಂಧನಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸಿದ ಶೋಧದ ವೇಳೆ ಕನಿಷ್ಠ 44.6 ಲಕ್ಷ ರೂ.(ಸುಮಾರು) ಹೆಚ್ಚುವರಿ ನಗದು ಪತ್ತೆಯಾಗಿದೆ.
ಸಿಬಿಐ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ದಲ್ಲಿ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ವೈದ್ಯರು, ಅನುಕೂಲಕರ ತಪಾಸಣಾ ವರದಿಯನ್ನು ನೀಡಲು ಖಾಸಗಿ ವೈದ್ಯಕೀಯ ಕಾಲೇಜಿನ ಪ್ರತಿನಿಧಿಗಳಿಂದ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಮೇ 24 ರಂದು ಈಗ ಬಂಧಿತ ವೈದ್ಯ ಸೇರಿದಂತೆ ಮೂವರು ಆರೋಪಿಗಳು ಮತ್ತು ಕರ್ನಾಟಕದ ಬೆಳಗಾವಿಯಲ್ಲಿರುವ ಇಬ್ಬರು ಖಾಸಗಿ ವ್ಯಕ್ತಿಗಳು, ಖಾಸಗಿ ವೈದ್ಯಕೀಯ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದೆ.
ಖಾಸಗಿ ವೈದ್ಯಕೀಯ ಕಾಲೇಜಿನ ಪ್ರತಿನಿಧಿಗಳಿಂದ ಆರೋಪಿ 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೈದ್ಯನನ್ನು ಸಿಬಿಐ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ನಂತರ, ಆರೋಪಿ ಹಿರಿಯ ವೈದ್ಯರನ್ನು ಬಂಧಿಸಲಾಯಿತು.
ಕೋಲ್ಕತ್ತಾ, ಬರ್ಧಮಾನ್ ಮತ್ತು ಬೆಳಗಾವಿಯ ಹಲವಾರು ಸ್ಥಳಗಳಲ್ಲಿ ಬಂಧಿತ ಸರ್ಕಾರಿ ವೈದ್ಯನ ಮನೆ ಮತ್ತು ಇತರ ಖಾಸಗಿ ವ್ಯಕ್ತಿಗಳ ವಸತಿ ಹಾಗೂ ಅಧಿಕೃತ ಆವರಣದಲ್ಲಿ ಸಿಬಿಐ ಶೋಧ ನಡೆಸಿದ್ದು, ಈ ವೇಳೆ ಹೆಚ್ಚುವರಿ 44.60 ಲಕ್ಷ ರೂ. ನಗದು ಪತ್ತೆಯಾಗಿದ್ದು, ಇದರಲ್ಲಿ ಅಪರಾಧ ದಾಖಲೆಗಳು ಮತ್ತು ವಸ್ತುಗಳು ಸೇರಿವೆ. ಕಾರ್ಯಾಚರಣೆಯ ಸಮಯದಲ್ಲಿ ಒಟ್ಟು 54.60 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.