ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಇಂದು ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮರಣ ಹೊಂದಿದ್ದಾರೆ. ಕಾರು ಮತ್ತು ಕೊರಿಯರ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಐದು ಜನರರಿದ್ದ ಕಾರು ಹುಮ್ನಾಬಾದ್ ಮೂಲಕ ಬೀದರ್-ಕಲಬುರಗಿ ಹೆದ್ದಾರಿಯ ಕಡೆಗೆ ತಿರುವು ಪಡೆದು ಕೊರಿಯರ್ ಸೇವೆಗಾಗಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಚಕ್ರದ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂವರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ಇತರ ಇಬ್ಬರು ಕಾಶಿನಾಥ, ಪ್ರತಾಪ ಮತ್ತು ಬೊಲೆರೊ ಚಾಲಕ ಗಾಯಗೊಂಡಿದ್ದು, ಬೀದರ್ ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ತಾಲೂಕಿನ ಜಗನಾಥಪುರ ಗ್ರಾಮದವರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ನವೀನ್ (25), ರಾಚಪ್ಪ (45) ಹಾಗೂ ನಾಗರಾಜ (40) ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.
ಕಲಬುರಗಿ ಜಿಲ್ಲೆಯ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದಾಗ ಭಾಲ್ಕಿ ತಾಲ್ಲೂಕಿನ ನೀಲಮಂಡಿ ತಾಂಡಾ ಬಳಿ ಬೆಳಿಗ್ಗೆ 7.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.