ಬೆಳಗಾವಿ: ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಳಗಾವಿಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ರೈತರನ್ನು ಮನವೊಲಿಸಲು ಆಗಮಿಸಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಕಾರ್ ಮೇಲೆ ಚಪ್ಪಲಿ, ನೀರಿನ ಬಾಟಲ್ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿ ಟನ್ ಕಬ್ಬಿಗೆ 3500 ರೂ. ನೀಡಬೇಕೆಂದು ಆಗ್ರಹಿಸಿ ರೈತರ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವ ಶಿವಾನಂದ ಪಾಟೀಲ್ ರೈತರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಎರಡು ದಿನ ಸಮಯಾವಕಾಶ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ರೈತ ಮುಖಂಡರು ನಾಳೆ 7 ಗಂಟೆವರೆಗೆ ಡೆಡ್ ಲೈನ್ ನೀಡಿದ್ದು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆಗಳು ಈಡೇರಿದರೆ ಮಾತ್ರ ನಾವು ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಅಲ್ಲಿಯವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಇನ್ನು ಸಚಿವರು ಯಾವುದೇ ಭರವಸೆ ನೀಡದೆ ತೆರಳಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಸಚಿವರ ಕಾರ್ ಗೆ ಮುತ್ತಿಗೆ ಹಾಕಲು ಮುಂದಾಗಿದ್ದು ಅವರ ಕಾರಿನ ಮೇಲೆ ಚಪ್ಪಲಿ, ನೀರಿನ ಬಾಟಲ್ ಎಸೆದು ಆಕ್ರೋಶ ಹೊರಹಾಕಿದ್ದಾರೆ.