ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ದಿಢೀರ್ ಭೇಟಿ ನೀಡಿದ್ದು, ಸ್ಥಳದಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಸ್ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗಾಗಿ ಮೀಸಲಿರುವ ಪ್ರದೇಶವು ಸಮತಟ್ಟಾಗಿರದೇ, ಮಳೆ ಬಂದ ಸಂದರ್ಭದಲ್ಲಿ ನೀರು ನಿಂತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಸಾಕಷ್ಟು ಮಂದಿ ಪ್ರಯಾಣಿಕರು ದೂರು ನೀಡಿದ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿಯವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿ, ಮುಂದಿನ ಹಂತದಲ್ಲಿ ಮಳೆಯಾದಾಗ ಜನರಿಗೆ ತೊಂದರೆಯಾಗುವ ಇನ್ನೆರಡು ಸ್ಥಳಗಳನ್ನು ಸರಿಪಡಿಸಲು ಸೂಚನೆ ನೀಡಿದರು.
ಬಳಿಕ ಸಚಿವರು ಬಸ್ ನಿಲ್ದಾಣದ ಎಲ್ಲಾ ಟರ್ಮಿನಲ್‌ಗಳ ಪರಿವೀಕ್ಷಣೆ ನಡೆಸಿದರು. ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ವಾಣಿಜ್ಯ ಮಳಿಗೆಗಳು ಖಾಲಿ ಉಳಿಯದಂತೆ ಕ್ರಮವಹಿಸಲು ಸೂಚಿಸಿದರು.
ವಾಣಿಜ್ಯ ಮಳಿಗೆಗಳು ಖಾಲಿಯಾಗಿ ಉಳಿಯಬಾರದು. ಸ್ಥಳದ ದುರುಪಯೋಗವನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಅನುಕೂಲವನ್ನು ಸುಧಾರಿಸಲು ಅವುಗಳನ್ನು ಹಂಚಿಕೆ ಮಾಡಬೇಕು ಎಂದು ಸೂಚನೆ ನೀಡಿದರು. ಅಲ್ಲದೆ, ಕುಡಿಯುವ ನೀರು, ವಿದ್ಯುತ್ ದೀಪ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು.
ಬಳಿಕ ಬಿಎಂಟಿಸಿ ಬಸ್ ನಿಲ್ದಾಣಕ್ಕೂ ಭೇಟಿ ನೀಡಿದ ಅವರು, ಕಟ್ಟಡದ ಮೇಲೆ ಬೆಳೆದಿರುವ ಗಿಡಗಳನ್ನು ತೆಗೆಸಿ, ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.