ಬೆಂಗಳೂರು: ಪ್ರಯಾಣಿಕ ಮಹಿಳೆಗೆ ರ್ಯಾಪಿಡೋ ಬೈಕ್ ಚಾಲಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗತ್ತಿದೆ.
ಬೆಂಗಳೂರಿನಲ್ಲಿ ಬೈಕ್ ಸವಾರಿ ಮಾಡುವಾಗ ಬೈಕ್ ಚಾಲಕ ಮಹಿಳಾ ಪ್ರಯಾಣಿಕರ ಕಾಲನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಈ ಕೃತ್ಯದ ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದು ಈ ವಿಡಿಯೋ ವೈರಲ್ ಆಗುತ್ತಿದೆ.
ಇನ್ನು ಈ ಸಂಬಂಧ ಮಹಿಳೆ ರಾಪಿಡೋ ಬೈಕ್ ಟ್ಯಾಕ್ಸಿ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ದೂರಿನ ಪ್ರಕಾರ, ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿಲ್ಸನ್ ಗಾರ್ಡನ್ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
"ಭೈಯಾ ಹೀಗ್ ಮಾಡ್ಬೇಡಿ"
ಇನ್ನು ನವೆಂಬರ್ 6 ರಂದು ನಡೆದ ಘಟನೆಯ ಕುರಿತು ಸಂತ್ರಸ್ಥ ಮಹಿಳೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ವಿಡಿಯೋ ಕೂಡ ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪೋಸ್ಟ್ ನಲ್ಲಿರುವಂತೆ ಸಂತ್ರಸ್ಥ ಮಹಿಳೆ ಚರ್ಚ್ ಸ್ಟ್ರೀಟ್‌ನಿಂದ ತಮ್ಮ ಪೇಯಿಂಗ್ ಗೆಸ್ಟ್ ವಸತಿ ಸೌಕರ್ಯಕ್ಕೆ ಬೈಕ್ ಬುಕ್ ಮಾಡಿದ್ದರು. ಅದರಂತೆ ಲೋಕೇಶ್ ಎಂಬ ಚಾಲಕ ಮಹಿಳೆಯನ್ನು ಹತ್ತಿಸಿಕೊಂಡಿದ್ದು, ಮಾರ್ಗ ಮಧ್ಯೆ ತಮ್ಮ ಕೈಗೊಳನ್ನು ಮಹಿಳೆಯ ತೊಡೆಗಳ ಮೇಲೆ ಇಟ್ಟಿದ್ದಾರೆ.
ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದ್ದ ಮಹಿಳೆ ಬಳಿಕ ಆತ ಪದೇ ಪದೇ ಅದೇ ಕೃತ್ಯವನ್ನು ಮುಂದುವರೆಸಿದ ಹಿನ್ನಲೆಯಲ್ಲಿ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಆ ಪ್ರದೇಶ ನನಗೆ ಪರಿಚಯವಿಲ್ಲದ ಕಾರಣ ನಾನು ಬೈಕ್ ನಿಲ್ಲಿಸಲಿಲ್ಲ. ಆದರೆ ನಾನು ಅತೀವ ಆತಂಕದಲ್ಲಿದ್ದೆ. ನಡುಗುತ್ತಿದ್ದೆ ಮತ್ತು ಕಣ್ಣೀರು ಸುರಿಸುತ್ತಿದ್ದೆ ಎಂದು ಹೇಳಿದ್ದಾರೆ.
ಪಿಜಿ ಹತ್ತಿರವಾಗುತ್ತಲೆ ಸ್ಥಳೀಯರೊಬ್ಬರು ಅಳುತ್ತಿದ್ದ ಮಹಿಳೆಯನ್ನು ನೋಡಿ ಬೈಕ್ ತಡೆದು ಪ್ರಶ್ನಿಸಿದ್ದಾರೆ. ಆಗು ನಾನು ನಡೆದ ಘಟನೆ ವಿವರಿಸಿದೆ. ಆಗ ಅವರು ಚಾಲಕನನ್ನು ಪ್ರಶ್ನಿಸಿದಾಗ ಆತ ಉದ್ದೇಶಪೂರ್ವಕವಾಗಿ ಮಾಡಲಿಲ್ಲ ಎಂದು ಸಬೂಬು ಹೇಳಿದೆ. ಬಳಿಕ ಕ್ಷಮೆಯಾಚಿಸಿ ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿ ಹೊರಟು ಹೋದ. ಆದರೆ ಹೋಗುವಾಗ ಆತ ನನ್ನ ಕಡೆ ಬೆರಳು ತೋರಿಸಿದ. ಇದು ನನ್ನ ಆತಂಕ ಮತ್ತಷ್ಟು ಹೆಚ್ಚಿಸಿದೆ ಎಂದು ಮಹಿಳೆ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಪೊಲೀಸ್ ಎಂಟ್ರಿ
ಇನ್ನು ಮಹಿಳೆಯ ಈ ಪೋಸ್ಟ್ ವೈರಲ್ ಆಗುತ್ತಲೇ ಬೆಂಗಳೂರು ಪೊಲೀಸರು ಮಧ್ಯಪ್ರವೇಶಿಸಿದ್ದು, ಸಂತ್ರಸ್ಥ ಮಹಿಳೆಯಿಂದ ಹೆಚ್ಚಿನ ಮಾಹಿತಿ ಕೋರಿದ್ದಾರೆ. ಅಂತೆಯೇ ಮಹಿಳೆ ಕೂಡ ಈ ಸಂಬಂಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆಯೂ ತಮ್ಮ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.