ಬೆಂಗಳೂರು: ಕರ್ನಾಟಕವನ್ನು ನಾವೀನ್ಯತೆ ಮತ್ತು ಆಳವಾದ ತಂತ್ರಜ್ಞಾನ ಪರಿಹಾರಗಳಿಗಾಗಿ ಜಾಗತಿಕ ತಾಣವಾಗಿ ಪರಿವರ್ತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಮೂರು ಪ್ರಮುಖ ನೀತಿಗಳಾದ ಮಾಹಿತಿ ತಂತ್ರಜ್ಞಾನ ನೀತಿ, ಬಾಹ್ಯಾಕಾಶ ತಂತ್ರಜ್ಞಾನ ನೀತಿ ಮತ್ತು ಸ್ಟಾರ್ಟ್ಅಪ್ ನೀತಿ ಅನಾವರಣಗೊಳಿಸಿದರು.
ಭಾರತದ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ರಾಜ್ಯದ ಸ್ಥಾನವನ್ನು ಬಲಪಡಿಸುವುದಾಗಿ ಹೇಳಿದ ಸಿಎಂ, ಕರ್ನಾಟಕವು "ಜಾಗತಿಕ ತಂತ್ರಜ್ಞಾನ ಕ್ರಾಂತಿಯಲ್ಲಿ ಭಾಗವಹಿಸುವುದಷ್ಟೇ ಅಲ್ಲ, ಅದನ್ನು ಮುನ್ನಡೆಸುತ್ತಿದೆ" ಎಂದು ಪ್ರತಿಪಾದಿಸಿದರು.
ರಾಜ್ಯ ಐಟಿ-ಬಿಟಿ ಇಲಾಖೆ ವತಿಯಿಂದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ(ಬಿಇಐಸಿ) ಆಯೋಜಿಸಲಾಗಿರುವ 'ಬೆಂಗಳೂರು ಟೆಕ್ ಸಮ್ಮಿಟ್ 2025' ಅನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀತಿ ನಾವೀನ್ಯತೆಯಲ್ಲಿ ಕರ್ನಾಟಕ ಯಾವಾಗಲೂ ಭಾರತವನ್ನು ಮುನ್ನಡೆಸಿದೆ ಎಂದು ಹೇಳಿದರು.
ನಾವು 1997 ರಲ್ಲಿ ಭಾರತದ ಮೊದಲ ಐಟಿ ನೀತಿಯನ್ನು ಪ್ರಾರಂಭಿಸಿದೇವು ಮತ್ತು ಹೊಸ ನೀತಿಗಳೊಂದಿಗೆ ಈ ನಾಯಕತ್ವವನ್ನು ಮುಂದುವರಿಸುತ್ತೇವೆ ಎಂದರು.
ಈ ಶೃಂಗಸಭೆಯಲ್ಲಿ, ನಾವು ಮೂರು ಪರಿವರ್ತಕ ನೀತಿಗಳನ್ನು ಆರಂಭಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಡುತ್ತಿದ್ದೇವೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025-2030, ಸ್ಪೇಸ್‌ಟೆಕ್ ನೀತಿ 2025-2030 ಮತ್ತು ಸ್ಟಾರ್ಟ್ಅಪ್ ನೀತಿ 2025-2030. ಈ ಮೂರು ನೀತಿಗಳೊಂದಿಗೆ ರಾಜ್ಯವನ್ನು ನಾವೀನ್ಯತೆ ಮತ್ತು ಆಳವಾದ ತಂತ್ರಜ್ಞಾನಕ್ಕಾಗಿ ಜಾಗತಿಕ ತಾಣವಾಗಿ ಪರಿವರ್ತಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದರು.
ಸ್ಪೇಸ್‌ಟೆಕ್ ನೀತಿ 2025-2030
ಸ್ಪೇಸ್‌ಟೆಕ್ ನೀತಿ 2025-2030 ರೊಂದಿಗೆ "ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಇರಿಸುವ ಗುರಿಯನ್ನು ನಾವು ಹೊಂದಿದ್ದೇವೆ. 2034 ರ ವೇಳೆಗೆ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 50 ರಷ್ಟು ಮತ್ತು ಜಾಗತಿಕವಾಗಿ ಶೇ. 5 ರಷ್ಟು ಭಾಗವನ್ನು ವಶಪಡಿಸಿಕೊಳ್ಳುತ್ತೇವೆ" ಎಂದು ಸಿಎಂ ತಿಳಿಸಿದರು.
ಸ್ಟಾರ್ಟ್ಅಪ್ ನೀತಿ 2025-2030
"ಹೊಸ ಸ್ಟಾರ್ಟ್ಅಪ್ ನೀತಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಮತ್ತು ಈ ನೀತಿಯು ಮುಂದಿನ ಐದು ವರ್ಷಗಳಲ್ಲಿ ಹಣಕಾಸು, ಮಾರುಕಟ್ಟೆ ಪ್ರವೇಶ, ಮೂಲಸೌಕರ್ಯ, ಪ್ರತಿಭಾ ಅಭಿವೃದ್ಧಿ ಮತ್ತು ಸಾಮಾಜಿಕ ಸೇರ್ಪಡೆಯಲ್ಲಿ ಕಾರ್ಯತಂತ್ರದ ಮಧ್ಯಸ್ಥಿಕೆಗಳ ಮೂಲಕ 25,000 ಸ್ಟಾರ್ಟ್ಅಪ್‌ಗಳನ್ನು ರಚಿಸಲು ಅನುವು ಮಾಡಿಕೊಡುವ ಗುರಿ ಹೊಂದಿದೆ" ಎಂದು ಸಿಎಂ ಹೇಳಿದರು.
"ಫ್ಯೂಚರೈಸ್" ಎಂಬ ಶೀರ್ಷಿಕೆಯಡಿಯಲ್ಲಿ 28ನೇ ಆವೃತ್ತಿಯ ಟೆಕ್ ಸಮ್ಮಿಟ್‌ನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡೀಪ್ ಟೆಕ್, ಎಐ, ಸೆಮಿಕಾನ್, ಡಿಜಿ-ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ, ನವೋದ್ಯಮ ಪರಿಸರ, ರಕ್ಷಣೆ ಮತ್ತು ಬಾಹ್ಯಾಕಾಶ ಹೀಗೆ 9 ವಿಭಿನ್ನ ಪರಿಕಲ್ಪನೆಗಳ ಅಡಿಯಲ್ಲಿ ಪ್ರದರ್ಶನಗಳು ಮತ್ತು ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಜಗತ್ತಿಗೆ ನಮ್ಮ ಸಂದೇಶ ಸರಳ ಮತ್ತು ಪ್ರಾಮಾಣಿಕ
ಜಗತ್ತಿಗೆ ನಮ್ಮ ಸಂದೇಶ ಸರಳ ಮತ್ತು ಪ್ರಾಮಾಣಿಕವಾಗಿದ್ದು, ಕರ್ನಾಟಕ ಸರ್ಕಾರವು ನಿಮ್ಮನ್ನು ಬೆಂಬಲಿಸಲು ಇಲ್ಲಿದೆ. ನೀವು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಬಯಸುವ ಜಾಗತಿಕ ಕಂಪನಿಯಾಗಿರಬಹುದು, ನಿಮ್ಮ ಮೊದಲ ಮೂಲಮಾದರಿಯನ್ನು ನಿರ್ಮಿಸುವ ನವೋದ್ಯಮವಾಗಿರಬಹುದು. ಗಡಿನಾಡಿನ ಸಂಶೋಧನೆ ನಡೆಸುವ ಶಿಕ್ಷಣ ತಜ್ಞರಾಗಿರಬಹುದು ಅಥವಾ ಪರಿವರ್ತನಾ ವಿಚಾರಗಳನ್ನು ಹುಡುಕುತ್ತಿರುವ ಹೂಡಿಕೆದಾರರಾಗಿರಬಹುದು, ಕರ್ನಾಟಕವು ನಿಮ್ಮ ಮನೆಯಾಗಿದೆ. ನಾವು ಮೂಲಸೌಕರ್ಯ, ಕೌಶಲ್ಯ, ನೀತಿ ಪರಿಸರ, ಪ್ರತಿಭಾ ಪೈಪ್‌ಲೈನ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಮಹತ್ವಾಕಾಂಕ್ಷೆಯು ಇಲ್ಲಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ಕಂಡುಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಒದಗಿಸುತ್ತೇವೆ" ಎಂದು ಸಿಎಂ ಹೇಳಿದರು.