ಬೆಂಗಳೂರು: ಪ್ರತಿ ವರ್ಷ ಐವರು ಪರಿಸರವಾದಿಗಳಿಗೆ ಸಾಲು ಮರದ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷಗಳು ತುಂಬಿರುವ ಅಂಗವಾಗಿ ಇಂದು ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಒಂದು ಕೋಟಿ ದತ್ತಿ ನಿಧಿಯನ್ನು ಸ್ಥಾಪಿಸಿ, ಠೇವಣಿ ಇರುವ ಹಣದ ಬಡ್ಡಿಯಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಹಾಗೂ ಕನಿಷ್ಠ ಐದು ಪರಿಸರವಾದಿಗಳಿಗೆ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡಲಾಗುವುದು ಎಂದರು.
ಭೂಮಿಯ ಮೇಲಿನ ಜೀವಸಂಕುಲಕ್ಕೆ ಬದುಕಲು ಉತ್ತಮ ಪರಿಸರ ಅವಶ್ಯ. ಮಾಲಿನ್ಯ ರಹಿತ ಪರಿಸರವನ್ನು ನಿರ್ಮಿಸುವುದು ಅತ್ಯಂತ ಅವಶ್ಯವಾಗಿದೆ. ನಾವು ಉಸಿರಾಡುವ ಗಾಳಿ, ನೀರು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ಕೇಂದ್ರದ ವರದಿಯ ಪ್ರಕಾರ ದೇಶದ ಹಲವು ನಗರಗಳು ಮಾಲಿನ್ಯದಿಂದ ಕೂಡಿವೆ. ಈ ಪಟ್ಟಿಯಲ್ಲಿ ಬೆಂಗಳೂರು, ದಾವಣಗೆರೆ, ಕಲಬುರ್ಗಿ ನಗರವೂ ಸೇರಿರುವುದು ಆತಂಕಕಾರಿ ವಿಷಯ. ನಮ್ಮ ರಾಜ್ಯವನ್ನು ವಾಸಯೋಗ್ಯವಾಗಿಸಲು, ಜನರೆಲ್ಲರೂ ಪರಿಸರ ಬಗ್ಗೆ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಬೆಂಗಳೂರು ನಗರ ಒಂದರಲ್ಲೇ 900 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಇದನ್ನು ಜನ ಅರ್ಥಮಾಡಿಕೊಳ್ಳದೇ ಹೋದರೆ ಪ್ಲಾಸ್ಟಿಕ್ ಮುಕ್ತ ನಗರವಾಗಲು ಸಾಧ್ಯವಿಲ್ಲ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ, ಸರ್ಕಾರದ ಜೊತೆ ಕೈಜೋಡಿಸಿದಾಗ ಮಾತ್ರ 2030ರ ಹೊತ್ತಿಗೆ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಸಾಧ್ಯ ಎಂದು ಹೇಳಿದರು.
ಕೇಂದ್ರದ ವರದಿಯ ಪ್ರಕಾರ 131 ನಗರಗಳು ಮಾಲಿನ್ಯದಿಂದ ಕೂಡಿದ್ದು, ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿದೆ. ಅದರಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳು ಸೇರಿವೆ. ಇದು ಆತಂಕಕಾರಿ ವಿಷಯ. ಬೆಂಗಳೂರಿನಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ. ಅದಕ್ಕಾಗಿ ಎಲ್ಲರೂ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಸಾಲು ಮರದ ತಿಮ್ಮಕ್ಕ ಇದಕ್ಕೆ ಶ್ರೇಷ್ಠ ಉದಾಹರಣೆ. ಇತ್ತೀಚೆಗೆ ನಿಧನರಾದ ಅವರು ಬಹಳಷ್ಟು ಮರಗಿಡಗಳನ್ನು ತಮ್ಮ ಮಕ್ಕಳಂತೆ ಬೆಳೆಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಪ್ರತಿಯೊಬ್ಬರೂ ಸಾಲಮರದ ತಿಮ್ಮಕ್ಕನವರಂತೆ ಆಗಬೇಕು ಎನ್ನುವ ಆಶಯ ನಮ್ಮದು ಎಂದರು.
ಬೆಂಗಳೂರು ಗಾರ್ಬೇಜ್ ನಗರ ಎಂಬ ಟೀಕೆಗೆ ನಗರ ಗುರಿಯಾಗುತ್ತಿದ್ದು, ಬೆಂಗಳೂರನ್ನು ಗಾರ್ಬೇಜ್ ನಗರವಾಗಿಸುವುದು ನಮ್ಮ ಉದ್ದೇಶವಲ್ಲ. ಪ್ಲಾಸ್ಟಿಕ್ ಮತ್ತು ಕಸ ಮುಕ್ತ ನಗರವಾಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶ. ಜನರೂ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಬೇಕು ಎಂದು ಮನವಿ ಮಾಡುತ್ತೇನೆ. ಕೈಗಾರಿಕೋದ್ಯಮಿಗಳು ತ್ಯಾಜ್ಯವನ್ನು ಸಾರ್ವಜನಿಕರಿಗೆ, ಸಮಾಜಕ್ಕೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ನಿರ್ವಹಿಸುವುದು ಕೈಗಾರಿಕೋದ್ಯಮಿಗಳ ಜವಾಬ್ದಾರಿ. ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಕೈಗಾರಿಕೆಗಳು ಅಗತ್ಯ. ಆದರೆ ಪರಿಸರ ಮಾಲಿನ್ಯ ಉಂಟಾಗದಂತೆ ಎಚ್ಚರ ವಹಿಸುವುದು ಕೂಡ ಅವಶ್ಯಕ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.