ಬೆಂಗಳೂರು: ರಾಜರಾಜೇಶ್ವರಿ ನಗರದ ಗ್ಲೋಬಲ್ ಸಿಟಿ (ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್) ಬಳಿ ಮಂಗಳವಾರ ನಡೆದಿರುವ ಹಲ್ಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಚಿ ಶೀಟರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.
ಆರೋಪಿಗಳನ್ನು ಸಾಯಿ ಲೇಔಟ್ ನಿವಾಸಿ ರೌಡಿ ಶೀಟರ್ ವಿಘ್ನೇಶ್ ಆರ್ (29). ಕೋಣನಕುಂಟೆಯ ಹೇಮಂತ್ ಕೆ (23), ಆರ್.ಆರ್. ನಗರದ ಕೃಷ್ಣ ಗಾರ್ಡನ್‌ನ ಕೆ.ಆರ್. ಪ್ರಜ್ವಲ್ (23), ಪಟ್ಟಣಗೆರೆಯ ಬಾಲಾಜಿ ಎಸ್ (21) ಮತ್ತು ವಿಶಾಲ್ ಮೂರ್ತಿ ಕೆ (23) ಎಂದು ಗುರ್ತಿಸಲಾಗಿದೆ.
ಬಂಧಿತ ಆರೋಪಿಗಳು ಮಂಗಳವಾರ ಬೆಳಗಿನ ಜಾವ 12 ರಿಂದ 1 ಗಂಟೆಯ ನಡುವೆ ನಾಲ್ವರನ್ನು ಬೆದರಿಸಿ ಮೊಬೈಲ್ ಫೋನ್‌ಗಳು ಮತ್ತು ದ್ವಿಚಕ್ರ ವಾಹನವನ್ನು ದರೋಡೆ ಮಾಡಿದ್ದರು ಎನ್ನಲಾಗಿದ್ದು, ಐವರ ವಿರುದ್ಧ ಒಟ್ಟು 5 ಪ್ರಕರಣಗಳು ದಾಖಲಾಗಿದೆ.
ನವೆಂಬರ್ 16 ರಂದು ರಾತ್ರಿ 11.45 ರ ಸುಮಾರಿಗೆ, ಟೆಕ್ ಪಾರ್ಕ್ ಬಳಿಯ ಬಾರ್ ಮತ್ತು ರೆಸ್ಟೋರೆಂಟ್ ಬಳಿ ಆರೋಪಿಗಳು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಇದಾದ ಬಳಿಕ ನವೆಂಬರ್ 17 ರಂದು ಮಧ್ಯರಾತ್ರಿ ಒಂದೇ ಸ್ಥಳದಲ್ಲಿ ಮೂವರ ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ.
ರಾತ್ರಿ 12.30 ರ ಸುಮಾರಿಗೆ ಮತ್ತೊಬ್ಬ ವ್ಯಕ್ತಿಯಿಂದ ಐಫೋನ್ ಮತ್ತು ಸ್ಕೂಟರ್ ಅನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
12.45 ರ ಸುಮಾರಿಗೆ, ಮೈಲಸಂದ್ರ ಬಳಿ ಮರದ ಕೋಲಿನಿಂದ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ, ನಂತರ ಆರ್.ಆರ್. ನಗರದ ದಂಪತಿಯಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸಿದರು, ಈ ವೇಳೆ ದಂಪತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ವಿಘ್ನೇಶ್ ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದು, ಇತರ ನಾಲ್ವರೊಂದಿಗೆ ಸೇರಿಕೊಂಡು ದರೋಡೆಯಲ್ಲಿ ಭಾಗಿಯಾಗಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಮತ್ತು ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಮಂಗಳವಾರ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ಕದ್ದ ವಸ್ತು ಮತ್ತು ಬಳಸಿದ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.