ಬೆಂಗಳೂರು: ಮೇಕೆದಾಟು ಜಲಾಶಯ ಯೋಜನೆಯ ಕುರಿತು ರಾಜ್ಯ ಸರ್ಕಾರ ಹೊಸ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಸಲ್ಲಿಸಿದ್ದ ಡಿಪಿಆರ್ ತಿರಸ್ಕರಿಸಲ್ಪಟ್ಟಿದ್ದರಿಂದ, ಅದರ ಲೋಪದೋಷಗಳನ್ನು ಸರಿಪಡಿಸಿ, ಯೋಜನೆಯ ಸಂಪೂರ್ಣ ವಿವರಗಳೊಂದಿಗೆ, ಅರಣ್ಯ ಪ್ರದೇಶದ ಮುಳುಗಡೆಯ ಮಾಹಿತಿಯನ್ನೂ ಒಳಗೊಂಡ ಹೊಸ ಡಿಪಿಆರ್ ಅನ್ನು ಕಾನೂನು ಪ್ರಕಾರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಬಾರಿಯ ಹೊಸ ಡಿಪಿಆರ್ ಸಿದ್ದಪಡಿಸಿದ ನಂತರ ಕೇಂದ್ರಕ್ಕೆ ನಿಯೋಗವೊಂದನ್ನು ಕೊಂಡೊಯ್ದು ಅಲ್ಲಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಯೋಜನೆಗೆ ಸಹಕಾರ ಕೋರತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸದ್ಯಕ್ಕೆ ಅದರ ಅವಶ್ಯಕತೆಯಿಲ್ಲ. ಮುಂದೆ ಅವಶ್ಯಕತೆ ಬಂದಾಗ ಹೋಗುತ್ತೇವೆ ಎಂದರು.