ಕೇಂದ್ರ ಸರ್ಕಾರಿ ಅಧಿಕಾರಿಗಳಂತೆ ನಟಿಸಿದ ಅಪರಿಚಿತ ವ್ಯಕ್ತಿಗಳು ಬುಧವಾರ ಎಟಿಎಂಗೆ ಹಣ ಹಾಕಲು ಹೊರಟಿದ್ದ ವಾಹನ ತಡೆದು ಸುಮಾರು 7 ಕೋಟಿ ರೂ.ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಜೆಪಿ ನಗರದ ಬ್ಯಾಂಕ್ ಶಾಖೆಯಿಂದ ವಾಹನದಲ್ಲಿ ಹಣವನ್ನು ಸಾಗಿಸುತ್ತಿದ್ದಾಗ ಅಶೋಕ ಪಿಲ್ಲರ್ ಬಳಿ ಈ ಘಟನೆ ನಡೆದಿದೆ. ಭಾರತ ಸರ್ಕಾರ ಎಂಬ ಸ್ಟಿಕ್ಕರ್ ಹೊಂದಿದ್ದ ಕಾರಿನಲ್ಲಿ ಬಂದ ವ್ಯಕ್ತಿಗಳ ಗುಂಪೊಂದು ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹೊರಟಿದ್ದ ಹಣ ಇದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್ನ ಬಳಿ ತಡೆದಿದೆ. ನಾವು ಆರ್ಬಿಐನವರು ಎಂದು ಹೇಳಿಕೊಂಡು ಹೆದರಿಸಿದ್ದಾರೆ. ಗನ್ಮ್ಯಾನ್ ಸೇರಿದಂತೆ ಉಳಿದವರನ್ನೆಲ್ಲ ಅಲ್ಲೇ ಇಳಿಸಿ ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್ಗೆ ಕರೆದೊಯ್ದಿದ್ದಾರೆ. ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ವಾಹನ ನಿಲ್ಲಿಸಿ ಅದರಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಎಟಿಎಂ ವಾಹನದಲ್ಲಿ ಒಟ್ಟು ನಾಲ್ಕು ಜನ ಸಿಎಂಎಸ್ ಸಿಬ್ಬಂದಿ ಇದ್ದರು. ಓರ್ವ ಡ್ರೈವರ್,ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಇದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿಚಾರಣೆ ನಡೆಯುತ್ತಿದೆ.
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಇರುತ್ತಿದ್ದರು. ಅಲ್ಲಿ ಅಂತಹ ಅನಿವಾರ್ಯತೆ ಇದ್ದಿತು, ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೋಸೆಕ್ಸ್ ಬೆಳೀತಿದ್ದವು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಪುರುಷೋತ್ತಮ ಬಿಳಿಮಲೆಯವರು ನೀಡಿದ ಈ ಹೇಳಿಕೆ ಭಾರಿ ವಿರೋಧಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಬಿಳಿಮಲೆ, ಸಲಿಂಗಕಾಮ ಈಗ ಇಲ್ಲ. 60-70 ರ ದಶಕದಲ್ಲಿದ್ದಾಗ ಇದು ಯಕ್ಷಗಾನದಲ್ಲಿ ಇತ್ತು. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದನ್ನು ಹೇಳಿದ್ದೇನೆ. ಯಕ್ಷಗಾನ ಕಲಾವಿದರಿಗೆ ಅವಮಾನ ಮಾಡಿಲ್ಲ, ಮಾಡುವ ಉದ್ದೇಶ ಕೂಡ ನನ್ನದಾಗಿರಲಿಲ್ಲ, ನನ್ನ ಹೇಳಿಕೆ ಬೇಸರವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಕೇರಳ ರಾಜ್ಯದಲ್ಲಿರುವ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಕಳೆದ ಭಾನುವಾರದಿಂದ ಭಕ್ತರಿಗೆ ತೆರೆಯಲಾಗಿದೆ. ಮತ್ತೊಂದೆಡೆ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ವೈರಸ್ ಭೀತಿ ಕಾಡುತ್ತಿದೆ. ಈ ಕುರಿತಂತೆ ರಾಜ್ಯದಿಂದ ತೆರಳಿರುವ ಅಯ್ಯಪ್ಪ ಭಕ್ತ ಮಾಲಾಧಾರಿಗಳಿಗೆ ಸುರಕ್ಷತಾ ಸಲಹಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. ಕೇರಳ ರಾಜ್ಯದಲ್ಲಿ ನೇಗ್ಲೇರಿಯಾ ಫೌಲೇರಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆ ಪ್ರಕರಣಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಯಾತ್ರಾರ್ಥಿಗಳಿಗೆ ಇಲಾಖೆಯು ಎಚ್ಚರಿಸಿದೆ.
ಸರ್ಕಾರದ ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ಶಾಶ್ವತವಾಗಿ ಇರಲು ಆಗದು, ಬೇರೆಯವರಿಗೆ ಅವಕಾಶ ನೀಡಬೇಕು. ನಾನು ಎಲ್ಲಿರುತ್ತೇನೋ ಎಲ್ಲಿ ಇರುವುದಿಲ್ಲವೋ ಎನ್ನುವುದು ಮುಖ್ಯ ಅಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಉದ್ದೇಶ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೂ ಸ್ವಲ್ಪ ದಿನ ಕಳೆದರೇ, ಆರು ವರ್ಷವಾಗುತ್ತೆ. ಡಿಸಿಎಂ ಆದ ತಕ್ಷಣವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಬೇಕೆಂದು ನಿರ್ಧರಿಸಿದ್ದೆ. ಆದರೇ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯಿರಿ ಎಂಬ ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ.
ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಮನಸ್ಸಿಗೆ ಬಂದ ಬೆಲೆಗೆ ಮೆಡಿಸನ್ ಮಾರಾಟ ಮಾಡಲಾಗುತ್ತಿದ್ದು, ಹಗಲು ದರೋಡೆ ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿಟಿ ರವಿ ಬುಧವಾರ ಆರೋಪಿಸಿದರು. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಬೆಲೆಗಿಂತ 10 ಪಟ್ಟು ಹೆಚ್ಚಿನ ಬೆಲೆಯಲ್ಲಿ ಮೆಡಿಸಿನ್ ಮಾರಾಟ ಮಾಡಲಾಗುತ್ತಿದ್ದು, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಜೀವರಕ್ಷಕ ಔಷಧಿಗಳ ಖರೀದಿಗೆ ಟೆಂಡರ್ ಕರೆಯುವಾಗ ಗೋಲ್ಮಾ್ಲ್ ನಡೆಸಿದ್ದಾರೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.