ಬೆಂಗಳೂರು: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ, ಗಗನಯಾನ ಮಿಷನ್‌ಗೆ ಸಿದ್ಧತೆಯಾಗಿ ಸುಮಾರು 80,000 ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಅವರು ಬುಧವಾರ ಹೇಳಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್ -2025ರ ಎರಡನೇ ದಿನದಂದು 'ಭಾರತದ ಬಾಹ್ಯಾಕಾಶ ದೃಷ್ಟಿ 2047- ತಂತ್ರಜ್ಞಾನ, ಸವಾಲುಗಳು ಮತ್ತು ಮುಂದಿನ ದಾರಿ' ಕುರಿತು ಮಾತನಾಡಿದ ವಿ ನಾರಾಯಣನ್ ಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಿಜ್ಞಾನಿಗಳು ಡಿಸೆಂಬರ್ 2025 ರಲ್ಲಿ ನಿಗದಿಯಾಗಿರುವ ಮೊದಲ ಸಿಬ್ಬಂದಿ ರಹಿತ ಬಾಹ್ಯಾಕಾಶ ಯಾನವನ್ನು "ಯಾವುದೇ ಸಮಯದಲ್ಲಿ" ಪ್ರಾರಂಭಿಸಲು ಸಿದ್ಧರಾಗಿದ್ದಾರೆ ಎಂದರು.
ಆದಾಗ್ಯೂ, ಮೂರು ಮಾನವ ರಹಿತ ಗಗನಯಾನ ಮಿಷನ್ ಗಳಲ್ಲಿ ಮೊದಲನೆಯದನ್ನು ಪ್ರಾರಂಭಿಸಲು ತಾವು ಸಂಪೂರ್ಣ ಸಿದ್ಧರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉಡಾವಣೆಗೆ ಇನ್ನೂ ದಿನಾಂಕ ಅಂತಿಮಗೊಳಿಸಿಲ್ಲ ಎಂದರು.
ಸಂಪೂರ್ಣ ಸುರಕ್ಷತೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ ಹಾರಾಟಕ್ಕೆ ಮೊದಲು ಮೂರು ಸಿಬ್ಬಂದಿ ರಹಿತ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
2027ರ ಮೊದಲ ತ್ರೈಮಾಸಿಕದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿರುವ ಮೊದಲ ಮಾನವಸಹಿತ ಕಾರ್ಯಾಚರಣೆಯಾದ ಗಗನಯಾನ ಮಿಷನ್ ಮತ್ತು 2035ಕ್ಕೆ ನಿಗದಿಪಡಿಸಲಾದ ಭಾರತೀಯ ಆಂಟ್ರಿಕ್ ಸ್ಟೇಷನ್(ಬಿಎಎಸ್) ಸ್ಥಾಪನೆಯ ವೇಳಾಪಟ್ಟಿಯನ್ನು ಅವರು ತಿಳಿಸಿದರು. ಬಾಹ್ಯಾಕಾಶದಲ್ಲಿ ಬಿಎಎಸ್ ಅನ್ನು ನಿಲ್ಲಿಸುವ ಮೊದಲ ಮಾಡ್ಯೂಲ್ ಅನ್ನು 2028 ರಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಯೋಜನೆ ಇದೆ. ಬಾಹ್ಯಾಕಾಶದಲ್ಲಿ ಜೋಡಿಸಲಾಗುವ 52 ಟನ್ ತೂಕದ ಬಿಎಎಸ್ 2035 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ಮುಂಬರುವ ಚಂದ್ರಯಾನ ಕಾರ್ಯಾಚರಣೆಯ ವಿವರಗಳನ್ನು ನೀಡಿದ ನಾರಾಯಣನ್ ಅವರು, ಚಂದ್ರಯಾನ-4 ಅನ್ನು 2027 ರಲ್ಲಿ ಉಡಾವಣೆ ಮಾಡಲಾಗುವುದು ಮತ್ತು ಬಾಹ್ಯಾಕಾಶ ನೌಕೆಯ ಸಂರಚನೆಯು ಅಂತಿಮ ಹಂತದಲ್ಲಿದೆ ಎಂದು ಹೇಳಿದರು.
ಆಗಸ್ಟ್ 2024 ರಲ್ಲಿ ಭಾರತದ ಮೊದಲ ಯಶಸ್ವಿ ಚಂದ್ರಯಾನ-3 ರ ಒಟ್ಟು ದ್ರವ್ಯರಾಶಿ 3,900 ಕೆಜಿ ಆಗಿದ್ದರೆ, ಚಂದ್ರಯಾನ-4 ರ ದ್ರವ್ಯರಾಶಿ 9,600 ಕೆಜಿ ಆಗಿರುತ್ತದೆ. ಚಂದ್ರನಿಂದ ಮಾದರಿಗಳನ್ನು ಮರಳಿ ತರಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
"ನಾವು ಚಂದ್ರಯಾನ-2 ಆರ್ಬಿಟರ್‌ನಲ್ಲಿ ಅತ್ಯುತ್ತಮ ಕ್ಯಾಮೆರಾಗಳನ್ನು ನಿಯೋಜಿಸಿದ್ದೇವೆ. ಅತ್ಯುತ್ತಮ ಕ್ಯಾಮೆರಾಗಳು ಚಂದ್ರನ ಮೇಲೆ ಮತ್ತು ಅದರ ಕಕ್ಷೆಯಲ್ಲಿವೆ. ಈಗ ನಾವು ಚಂದ್ರನ ಧ್ರುವ ಪರಿಶೋಧನೆ(ಲುಪೆಕ್ಸ್) ಕಾರ್ಯಾಚರಣೆಯಲ್ಲಿ(ಚಂದ್ರಯಾನ-5 ಎಂದೂ ಕರೆಯುತ್ತಾರೆ) ಚಂದ್ರನ ಮೇಲೆ ಭಾರವಾದ ಲ್ಯಾಂಡರ್‌ಗಳು ಮತ್ತು ರೋವರ್‌ಗಳನ್ನು ಉಡಾಯಿಸುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಜಪಾನ್‌ನ ಸಹಭಾಗಿತ್ವದಲ್ಲಿ 2028ಕ್ಕೆ ನಿಗದಿಪಡಿಸಲಾಗಿದೆ. ಮೂರು ತಿಂಗಳ ಚಂದ್ರ ಪರಿಶೋಧನೆಗಾಗಿ(ಚಂದ್ರಯಾನ-5 ಗಾಗಿ) ಹೆಚ್ಚಿನ ಸಾಮರ್ಥ್ಯದ ಲ್ಯಾಂಡರ್ ಅಭಿವೃದ್ಧಿ ನಡೆಯುತ್ತಿದೆ" ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದರು.