ಚಿತ್ತೂರು: ಬೆಂಗಳೂರಿನಲ್ಲಿ ನಡೆದ ಎಟಿಎಂ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಎಟಿಎಂ ಕೇಂದ್ರಗಳಿಗೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ 7.11 ಕೋಟಿ ದರೋಡೆ ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೌತ್ ಎಂಡ್ ಸರ್ಕಲ್ ನಿಂದ ನಿನ್ನೆ ಮಧ್ಯಾಹ್ನ ಸಿಎಂಎಸ್ ಏಜೆನ್ಸಿ ವಾಹನವನ್ನು ತಡೆದು 7 ಕೋಟಿ 11 ಲಕ್ಷ ದರೋಡೆ ಪ್ರಕರಣದ ಆರೇಳು ಮಂದಿ ಆರೋಪಿಗಳಲ್ಲಿ ಇಬ್ಬರು ಶಂಕಿತರನ್ನು ತಿರುಪತಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ತಿರುಪತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳಿಂದ ಮಹತ್ವದ ಮಾಹಿತಿ
ಇದೇ ವೇಳೆ ಬಂಧಿತ ಇಬ್ಬರು ಶಂಕಿತ ಆರೋಪಿಗಳನ್ನು ಪೊಲೀಸರು ತೀವ್ರ ತನಿಖೆಗೊಳಪಡಿಸಿದ್ದು, ಈ ವೇಳೆ ಬಂಧಿತರು ಇತರೆ ಆರೋಪಿಗಳ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನೋವಾ ಕಾರು ಪತ್ತೆ
ಇದೇ ವೇಳೆ ದರೋಡೆಗೆ ಬಳಸಿದ್ದ ಇನ್ನೋವಾ ಕಾರು ತಿರುಪತಿಯಲ್ಲಿ ಬಳಿ ಪತ್ತೆಯಾಗಿದ್ದು, ಖಚಿತ ಮಾಹಿತಿಯನ್ನು ಆಧರಿಸಿ ಇನೋವಾ ಕಾರನ್ನು ದಕ್ಷಿಣ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರೋಡೆ ಬಳಿಕ ತಿರುಪತಿಯ ಬಳಿಯೇ ಇನೋವಾ ಕಾರು ಬಿಟ್ಟು ಆರೋಪಿಗಳು ಹಣದ ಸಮೇತ ಪರಾರಿಯಾಗಿದ್ದಾರೆ.
ಹೀಗಾಗಿ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ತಿರುಪತಿ ಪೊಲೀಸರ ಜೊತೆ ದಕ್ಷಿಣ ವಿಭಾಗ ಪೊಲೀಸರು ಹೋಟೆಲ್, ಲಾಡ್ಜ್, ದೇವಸ್ಥಾನ ಬಳಿ ಮಪ್ತಿಯಲ್ಲಿ ಶೋಧ ನಡೆಸಲಾಗುತ್ತಿದೆ.
20 ಮಂದಿ ವಿಚಾರಣೆ
ಈ ನಡುವೆ ದರೋಡೆ ಪ್ರಕರಣದ ಸಂಬಂಧ 20 ಕ್ಕೂ ಹೆಚ್ಚು ಮಂದಿಯನ್ನು ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ಸಿಬ್ಬಂದಿ, ಸಿಎಂಎಸ್ ಸಿಬ್ಬಂದಿಯನ್ನು ತೀವ್ರ ವಿಚಾರಣೆ ಮಾಡಲಾಗಿದ್ದು,ಘಟನೆಯ ಸಮಯವನ್ನು ಆಧರಿಸಿ ಪ್ರಶ್ನೆ ಕೇಳಲಾಗುತ್ತಿದೆ.
ಇನ್ನು ಪ್ರಕರಣದ ಪತ್ತೆಗೆ ರಚಿಸಲಾಗಿರುವ ವಿಶೇಷ ತಂಡಗಳು ದರೋಡೆಕೋರ ಪತ್ತೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.