ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ತಪಾಸಣೆ ವೇಳೆ ಕೈದಿ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಇನ್ನಿತರೆ ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ರಚಿಸಲಾದ ವಿಶೇಷ ತಂಡದ ಉಸ್ತುವಾರಿ ವಹಿಸಿದ್ದ ಕಾರವಾರ ಸಂಚಾರ ಠಾಣೆಯ ಪಿಎಸ್‌ಐ ಶ್ರೀಕಾಂತ್ ರಾಠೋಡ್ ಅವರು ಜಿಲ್ಲಾ ಕಾರಾಗೃಹ ಕಾರವಾರದ ಜೈಲಿನ ಮೇಲೆ ದಾಳಿ ಮಾಡಿದ್ದಾರೆ.
ತಪಾಸಣೆ ವೇಳೆ ಜೈಲಿನ ಒಳ ಸೆಲ್ ಬ್ಯಾರಕ್‌ನ 8ನೇ ಸೆಲ್‌ನಲ್ಲಿದ್ದ ವಿಚಾರಣಾಧೀನ ಕೈದಿ ಮೊಹಮ್ಮದ್ ನೌಫಲ್ (32) ಎಂಬಾತನ ಬಳಿ ನಿಷೇಧಿತ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಅಲ್ಲದೆ, ಇದೇ ಬ್ಯಾರಕ್‌ನ 9ನೇ ಸೆಲ್‌ನಲ್ಲಿ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಒಂದರಲ್ಲಿ 1 ಬೀಡಿ ಪ್ಯಾಕೆಟ್, 1 ಬೆಂಕಿಪೊಟ್ಟಣ, 1 ಹಳದಿ ಬಣ್ಣದ ಲೈಟರ್ ಹಾಗೂ ಒಣಗಿದ ಸೊಪ್ಪಿನ ಪುಡಿ ತರ ಕಾಣುವ ಸಂಶಯಾಸ್ಪದ ವಸ್ತು ತುಂಬಿದ್ದ 3 ಚಿಕ್ಕ ಪೇಪರ್ ಪ್ಯಾಕೆಟ್‌ಗಳು ಪತ್ತೆಯಾಗಿವೆ.
ಈ ಸಂಬಂಧ ಕಾರವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಎಸ್ ವಿ ಗಿರೀಶ್ ಅವರು ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.