ಬೆಂಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ಮತ್ತು ವಸತಿ ಸಚಿವ ಬಿ.ಜೆ. ಜಮೀರ್ ಅಹ್ಮದ್ ಖಾನ್ ಅವರು ಕಲ್ಯಾಣ ಕರ್ನಾಟಕದ 457 ಕುಟುಂಬಗಳು ದೀರ್ಘಕಾಲದಿಂದ ವಾಸಿಸುತ್ತಿರುವ ಜಾನಕಿರಾಮ ಲೇಔಟ್ ಮತ್ತು ಕಾಚರಕನಹಳ್ಳಿ ಸರೋವರಕ್ಕೆ ಹೊಂದಿಕೊಂಡಂತಿರುವ ಕೊಳಚೆ ಪ್ರದೇಶಕ್ಕೆ ಭೇಟಿ ನೀಡಿದರು. ಅವರಿಗೆ ವಸತಿ ಸಮುಚ್ಚಯದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಸರ್ಕಾರದ ವತಿಯಿಂದ ಕಡಿಮ ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸುವ ಕುರಿತು ಪರಿಶೀಲಿಸಿದರು, ಸರ್ವಜ್ಞ ನಗರದ ವಸತಿ ಸಂಕೀರ್ಣ ಹಾಗೂ ಕೊಳಗೇರಿಗೆ ವಸತಿ ಸಚಿರೊಂದಿಗೆ ಗುರುವಾರ ಭೇಟಿ ನೀಡಿದ ಸಚಿವ ಕೆ.ಜೆ.ಜಾರ್ಜ್ ಅವರು ವಸ್ತುಸ್ಥಿತಿ ಪರಿಶೀಲಿಸದರಲ್ಲದೆ, ಕೊಳೇರಿ ನಿವಾಸಿಗಳಿಗೆ ತುರ್ತಾಗಿ ಆಗಬೇಕಿರುವ ವಸತಿ ಸೌಕರ್ಯಗಳು ಹಾಗೂ ಅದಕ್ಕೆ ಅಗತ್ಯವಿರುವ ಹಣಕಾಸಿನ ಕುರಿತು ಚರ್ಚೆ ನಡೆಸಿದರು.
ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಕಾಲೋನಿ ಜಾನಕಿರಾಮ ಬಡಾವಣೆಯಲ್ಲಿನ 684 ಮನೆಗಳಿರುವ ವಸತಿ ಸಂಕೀರ್ಣದ ಬಳಿ ಶುರುವಾದ ಪರಿಶೀಲನಾ ಕಾರ್ಯ, ಕಾಚರಕನಹಳ್ಳಿ ಕೆರೆಯ ಅಂಗಳದ ಕೊಳಗೇರಿ ಪ್ರದೇಶದ 457 ಗುಡಿಸಲುಗಳ ಪರಿಶೀಲನೆಯೊಂದಿಗೆ ಮುಕ್ತಾಯವಾಯಿತು.
ಈ ವೇಳೆ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ವಸತಿ ಇಲಾಖೆಯು ಕರ್ನಾಟಕ ಗೃಹಮಂಡಳಿ ಮೂಲಕ ನಿರ್ಮಿಸಿದ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ವಸತಿ ಸೌಕರ್ಯವನ್ನು ಅಭಿವೃದ್ದಿಪಡಿಸಬೇಕಿದೆ. ಈ ನಿಟ್ಟಿನಲ್ಲಿ 684 ಮನೆಗಳನ್ನು ಗುರುತಿಸಿದ್ದು, ತಕ್ಷಣವೇ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ವಿವರಿಸಿದರು.
ಸಚಿವರಿಬ್ಬರು ಕಾಚರಕನಹಳ್ಳಿಗೆ ಹೊಂದಿಕೊಂಡಿರುವ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ವಸತಿ ಸೌಕರ್ಯದ ಬಗ್ಗೆಯೂ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, “ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಮೂಲದ ಶ್ರಮಿಕ ಜನರೇ ಹೆಚ್ಚಾಗಿ ವಾಸವಿದ್ದಾರೆ.
457 ಕುಟುಂಬಗಳು ಹಲವು ದಶಕಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಕೆಲವು ವರ್ಷಗಳ ಹಿಂದೆ ಬೆಂಕಿ ಅವಘಡದಲ್ಲಿ ತಮ್ಮ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ವಸತಿ ಇಲಾಖೆಯು ಮತದಾರರ ಗುರುತಿನ ಚೀಟಿಯನ್ನೇ ಪ್ರಮುಖ ದಾಖಲೆ ಎಂದು ಪರಿಗಣಿಸಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ವಸತಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣಕಾಸು ಒದಗಿಸುತ್ತಿವೆ. ಬ್ಯಾಂಕುಗಳು ಸಾಲ ನೀಡುತ್ತವೆ. ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ವಿಳಂಬವಿಲ್ಲದೆ ವಸತಿ ಒದಗಿಸಲು ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.