ಬೆಂಗಳೂರು: ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡು ಅಪಹರಿಸಿದ್ದ ನಗರದ ಬಿಪಿಒ ಸಂಸ್ಥೆಯ ಮ್ಯಾನೇಜರ್ ಮಟ್ಟದ ನಾಲ್ವರು ಉದ್ಯೋಗಿಗಳನ್ನು ಪೊಲೀಸರು ರಕ್ಷಿಸಿದ್ದು, ಘಟನೆಗೆ ಸಂಬಂಧಿಸಿದ ಎಂಟು ಜನರ ತಂಡವನ್ನು ಬಂಧಿಸಿದ್ದಾರೆ.
ಆರೋಪಿಗಳು ಸಂಸ್ಥೆಯ ಕಾರ್ಯಾಚರಣಾ ವ್ಯವಸ್ಥಾಪಕರಿಂದ 8.90 ಲಕ್ಷ ರೂ. ಸುಲಿಗೆ ಮಾಡಿದ್ದರು ಮತ್ತು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಹೆಚ್ಚಿನ ಆರೋಪಿಗಳು ಕೋಲಾರದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಲ್ಲಿ ಒಬ್ಬರು ಕೋಲಾರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಆರೋಪಿಗಳು ಸೈಬರ್ ಅಪರಾಧ ತಪಾಸಣೆ ನಡೆಸುತ್ತಿರುವ ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಹರಿಸಲ್ಪಟ್ಟ ಬಿಪಿಒ ವ್ಯವಸ್ಥಾಪಕರನ್ನು ಕೋಲಾರ ಜಿಲ್ಲೆಯ ಮಾಲೂರಿನ ಒಂದು ಸ್ಥಳದಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಬಿಪಿಒ ಸಿಬ್ಬಂದಿಯಿಂದ ತುರ್ತು ಸಹಾಯವಾಣಿ 112ಕ್ಕೆ ದೂರು ಬಂದ ನಂತರ ಪೊಲೀಸರು ಕ್ರಮ ಕೈಗೊಂಡರು.
'ಶುಕ್ರವಾರ ಮಧ್ಯರಾತ್ರಿ 1 ಗಂಟೆಗೆ, ಪೊಲೀಸರಂತೆ ನಟಿಸಿದ ಎಂಟು ಜನರು ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಿಪಿಒವೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಮ್ಯಾನೇಜರ್ ಮಟ್ಟದ ಉದ್ಯೋಗಿಗಳನ್ನು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿ ಅಪಹರಿಸಿದ್ದರು' ಎಂದು ಡಿಸಿಪಿ (ಆಗ್ನೇಯ) ಸಾರಾ ಫಾತಿಮಾ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಅಪಹರಿಸಲ್ಪಟ್ಟವರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಅವರು, ಸಂಸ್ಥೆಯ ಕಾರ್ಯಾಚರಣೆ ವ್ಯವಸ್ಥಾಪಕರಿಂದ ಆರೋಪಿಗಳಿಗೆ ಸಂಬಂಧಿಸಿದ ನಾಲ್ಕು ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್‌ನಲ್ಲಿ 8.90 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ನಗದು ರೂಪದಲ್ಲಿಯೂ ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಶನಿವಾರ ಬೆಳಿಗ್ಗೆ 4.30ಕ್ಕೆ ಪೊಲೀಸರು ದೂರು ಸ್ವೀಕರಿಸಿದ್ದು, ಪ್ರಕರಣವನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ಸಂಬಂಧ ಎಂಟು ಆರೋಪಿಗಳನ್ನು ಬಂಧಿಸಲಾಗಿದ್ದು, ಅಪಹರಣಕ್ಕೆ ಬಳಸಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಆರೋಪಿಗಳು ಸಂತ್ರಸ್ತರಿಂದ ಸಾಧ್ಯವಾದಷ್ಟು ಹಣವನ್ನು ಪಡೆಯಲು ಪ್ರಯತ್ನಿಸಿದರು. ನಗದು ರೂಪದಲ್ಲಿ ಹಣ ಕೇಳಿದ್ದಾರೆ ಮತ್ತು ಆ ಹಣವನ್ನು ಎಲ್ಲಿಗೆ ತಲುಪಿಸಬೇಕೆಂದು ಫೋನ್‌ನಲ್ಲಿ ನಿರ್ದೇಶನಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಆ ಹಣವನ್ನು ಹಸ್ತಾಂತರಿಸುವ ಮೊದಲೇ ಪೊಲೀಸರು ಅಪಹರಣಕಾರರನ್ನು ಬಂಧಿಸಿದ್ದಾರೆ.
ಹೆಚ್ಚಿನ ಆರೋಪಿಗಳು ಕೋಲಾರ ಜಿಲ್ಲೆಯವರಾಗಿದ್ದು, ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.