ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಮುಖ್ಯಮಂತ್ರಿ ಕುರ್ಚಿ ಫೈಟ್ ಜೋರಾಗಿದೆ. ಸರ್ಕಾರಕ್ಕೆ ಎರಡುವರೆ ವರ್ಷ ತುಂಬಿಂದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಸಿಡಿದೆದ್ದಿದ್ದು, ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದ್ದಾರೆ. ಅಲ್ಲದೇ ಡಿಕೆಶಿ ಬಣದ ಶಾಸಕರು ದೆಹಲಿಗೆ ಹೋಗಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಪರೇಡ್ ನಡೆಸಿದ್ದು, ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಎಲ್ಲಾ ಬೆಳವಣಿಗೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ. ರಾಜ್ಯದಲ್ಲಿನ ಸದ್ಯದ ಬೆಳವಣಿಗೆ ಬಗ್ಗೆ ನಾನು ಏನೂ ಹೇಳಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅಸಹಾಯಕತೆ ಹೊರಹಾಕಿದ್ದಾರೆ. ಕಾಂಗ್ರೆಸ್ ಕೇವಲ ಒಬ್ಬ ವ್ಯಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ಪಕ್ಷ, ಕಾರ್ಯಕರ್ತರು ಮತ್ತು ಎಲ್ಲಾ ಶಾಸಕರ ಕಠಿಣ ಪರಿಶ್ರಮದಿಂದಾಗಿ ನಾವು ಇಂದು ಅಧಿಕಾರದಲ್ಲಿದ್ದೇವೆ. ಸಿಎಂ ಆಯ್ಕೆ ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್‌ನ ನಿರ್ಧಾರ ಎಂದು ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಾಡುಹಗಲೇ ನಡೆದ 7 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ನನ್ನು ಅಮಾನತು ಮಾಡಲಾಗಿದೆ. ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅವರು ಪೇದೆ ಅಣ್ಣಪ್ಪ ನಾಯ್ಕ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ CMS ಸಂಸ್ಥೆ ಮಾಜಿ ನೌಕರ ಕ್ಸೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಪೇದೆ ಅಣ್ಣಪ್ಪ ನಾಯ್ಕ್, ಹಾಲಿ CMS ಸಂಸ್ಥೆ ಸಿಬ್ಬಂದಿ ಗೋಪಿ, ರವಿ, ಜಿತೇಶ್ ಸೇರಿ ಒಟ್ಟು ಏಳು ದರೋಡೆಕೋರರನ್ನ ಬಂಧಿಸಲಾಗಿದ್ದು ಆರೋಪಿಗಳಿಂದ ರೂ.5.7 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಕಂಠೀರವ ಸ್ಟುಡಿಯೋ ಸೌಲಭ್ಯಗಳನ್ನು ಕರ್ನಾಟಕದಾದ್ಯಂತ ಹಲವಾರು ಜಿಲ್ಲೆಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ. ಆರಂಭದಲ್ಲಿ ಚಲನಚಿತ್ರ ಚಿತ್ರೀಕರಣ ಸ್ಥಳಗಳ ಕೊರತೆಯನ್ನು ನೀಗಿಸಲು ಸ್ಥಾಪಿಸಲಾದ ಸ್ಟುಡಿಯೋವನ್ನು ಈಗ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ವಿಜಯನಗರ ಸೇರಿದಂತೆ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಸರ್ಕಾರವು ಪ್ರಸ್ತುತ ಸೂಕ್ತ ಭೂಮಿಯನ್ನು ಗುರುತಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಕಂಠೀರವ ಸ್ಟುಡಿಯೋಸ್ ಲಿಮಿಟೆಡ್ ಅಧ್ಯಕ್ಷ ಮಹಬೂಬ್ ಪಾಷಾ, ಈ ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿಗಳು ಅಥವಾ ಪ್ರಮುಖ ರಸ್ತೆಗಳ ಉದ್ದಕ್ಕೂ 25 ಎಕರೆ ಜಾಗವನ್ನು ಮೀಸಲಿಡಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಬೆಂಗಳೂರಿನ ಹೊರಗೆ ಚಲನಚಿತ್ರ ಮೂಲಸೌಕರ್ಯವನ್ನು ವಿಕೇಂದ್ರೀಕರಿಸುವುದು ಮತ್ತು ಉತ್ಪಾದನಾ ಸೌಲಭ್ಯಗಳನ್ನು ಒದಗಿಸುವುದು ಈ ವಿಸ್ತರಣೆಯ ಗುರಿಯಾಗಿದೆ ಎಂದು ಅವರು ಹೇಳಿದರು.
ಕೆಪಿಎಸ್ ಮ್ಯಾಗ್ನೆಟ್ ಸ್ಕೂಲ್ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳನ್ನು ಹರಾಜು ಹಾಕುವ ಕರ್ನಾಟಕ ಸರ್ಕಾರದ ಯೋಜನೆಯನ್ನು ಅಖಿಲ ಭಾರತ ಉಳಿತಾಯ ಶಿಕ್ಷಣ ಸಮಿತಿ ತೀವ್ರವಾಗಿ ಖಂಡಿಸಿದೆ. ಈ ಯೋಜನೆಯು 7,000 ಶಾಲೆಗಳನ್ನು ಮುಚ್ಚುವುದು ಮತ್ತು ಪ್ರಮುಖ ಶಾಲಾ ಭೂಮಿಯನ್ನು ಖಾಸಗಿ ಸಂಸ್ಥೆಗಳು ಮತ್ತು ರಾಜಕಾರಣಿಗಳಿಗೆ ಹಸ್ತಾಂತರಿಸುವ ಗುರಿಯನ್ನು ಹೊಂದಿದೆ ಎಂದು ಎಐಎಸ್‌ಇಸಿ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರ್ ಆರೋಪಿಸಿದ್ದಾರೆ. ಈ ಯೋಜನೆಯನ್ನು ಕೈಬಿಡುವಂತೆ, ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವಂತೆ, ಎಡಿಬಿಯೊಂದಿಗಿನ ಸಾಲದ ಷರತ್ತುಗಳನ್ನು ಬಹಿರಂಗಪಡಿಸಿ, ಬಡ ಮತ್ತು ಗ್ರಾಮೀಣ ಮಕ್ಕಳಿಗಾಗಿ ಶಾಲೆಗಳನ್ನು ರಕ್ಷಿಸುವಂತೆ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ಲೈಂಗಿಕ ಸಮಸ್ಯೆಗೆ ಆಯುರ್ವೇಧದ ಮೂಲಕ ಪರಿಹಾರ ನೀಡುವುದಾಗಿ ಹೇಳಿ ಬೆಂಗಳೂರು ಟೆಕ್ಕಿಯಿಂದ 48 ಲಕ್ಷ ರೂಪಾಯಿ ವಂಚಿಸಿರುವ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಯಂ ಘೋಷಿತ ವೈದ್ಯ ಮತ್ತು ಆಯುರ್ವೇದ ಅಂಗಡಿ ಮಾಲೀಕ ವಿಜಯ್ ಗುರೂಜಿ ಲೈಂಗಿಕ ಆರೋಗ್ಯ ಚಿಕಿತ್ಸೆಗಾಗಿ ದುಬಾರಿ ಮತ್ತು ಸಂಭಾವ್ಯ ಹಾನಿಕಾರಕ ಔಷಧಿಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 48 ಲಕ್ಷ ರೂಪಾಯಿ ವಂಚಿಸಿದ್ದಾರೆ. ಇದರಿಂದ ನಾನು ನನ್ನ ಕಿಡ್ನಿ ಸಹ ಕಳೆದುಕೊಂಡಿದ್ದೇನೆ ಎಂದು 29 ವರ್ಷದ ಸಂತ್ರಸ್ತ ತೇಜಸ್ ದೂರು ನೀಡಿದ್ದಾರೆ. ಮೂರರಿಂದ ನಾಲ್ಕು ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದೆ ಆಗ ನನಗೆ 18 ಲಕ್ಷ ರೂಪಾಯಿ ಖರ್ಚಾಗಿತ್ತು. ನಂತರ ಮಧ್ಯದಲ್ಲಿ ಚಿಕಿತ್ಸೆ ನಿಲ್ಲಿಸಿದರೆ ತಮ್ಮ ಆರೋಗ್ಯ ಹದಗೆಡುತ್ತದೆ ಎಂದು ಹೆದರಿಸಿದ್ದರು. ಹೀಗಾಗಿ ಬ್ಯಾಂಕ್ ನಲ್ಲಿ 20 ಲಕ್ಷ ರೂಪಾಯಿ ಸಾಲ ಪಡೆದು ಅದನ್ನು ಮತ್ತೆ ಔಷಧ ಖರೀದಿಗಾಗಿ ವ್ಯಯಿಸಿದ್ದಾಗಿ ತೇಜಸ್ ಆರೋಪಿಸಿದ್ದಾರೆ.