ಕಲಬುರಗಿ: ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಮೃತರಾಗಿದ್ದು, ಘಟನೆ ಬೆನ್ನಲ್ಲೇ ಕಾರು ಚಾಲಕನ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಹಾಂತೇಶ್ ಬೀಳಗಿ ಸಂಬಂಧಿ ಬಸವರಾಜ್ ಕಮರಟಗಿ ಎಂಬವವರು ಸಲ್ಲಿಸಿದ ದೂರು ಹಿನ್ನೆಲೆಯಲ್ಲಿ ಕಾರು ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ಧ 281 , 125(A)125(B)106 ಬಿಎನ್‌ಎಸ್ ಅಡಿ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ನಿರ್ಲಕ್ಷ್ಯದ ಚಾಲನೆ ಮತ್ತು ಅತಿ ವೇಗದಿಂದಾಗಿ ಅಪಘಾತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಒಂದು ಮದುವೆ ಕಾರ್ಯಕ್ರಮಕ್ಕಾಗಿ ಮಹಾಂತೇಶ್ ಅವರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸಂಜೆ 5.30ಕ್ಕೆ ಅಪಘಾತ ಆಗಿದೆ. ಕಾರ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮಹಾಂತೇಶ್ ಬೀಳಗಿ ಅವರ ಚಿಕ್ಕಪ್ಪನ ಮಕ್ಕಳಾದ ಈರಣ್ಣ ಬೀಳಗಿ, ಶಂಕರ ಬೀಳಗಿ, ಸ್ನೇಹಿತ ಈರಣ್ಣ ಸರಸಂಗಿ ಅವರು ನಿಧನರಾಗಿದ್ದಾರೆ.
ಅಪಘಾತದಲ್ಲಿ ರಸ್ತೆ ಬದಿಯ ಬ್ರಿಡ್ಜ್ ಗೆ ಕಾರು ಡಿಕ್ಕಿಯಾಗಿ ನಾಲ್ಕೈದು ಬಾರಿ ಕಾರ್ ಪಲ್ಟಿಯಾಗಿದೆ. ಕಾರ್ ಪಲ್ಟಿಯಾದ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವನ್ನಪ್ಪಿದ್ದಾರೆ, ಬೆಳಗಾವಿ ಜಿಲ್ಲೆಯ ರಾಮದುರ್ಗದ ವೀರಣ್ಣ ಅವರ ಪುತ್ರ ಅನಿಲ್ ಅವರಿಂದ ಮಂಗಳವಾರ ಸಂಜೆ 6 ಗಂಟೆಗೆ ದೂರವಾಣಿ ಕರೆ ಬಂದಿತ್ತು, ಚಾಲಕನ ಅತಿವೇಗ ಅಜಾರೋಗತೆಕತೆಯಿಂದ ಅಪಘಾತ ಸಂಭವಿಸಿದೆ. ಹೀಗಾಗಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಘಟನೆಯಲ್ಲಿ ಚಾಲಕ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ಹೇಳಿಕೆ ನೀಡಿರುವ ಚಾಲಕ, ರಸ್ತೆ ದಾಟುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಲು ಹೋಗಿ ವಾಹನ ನಿಯಂತ್ರಣ ಕಳೆದುಕೊಂಡಿತ್ತು ಎಂದು ಹೇಳಿದ್ದಾನೆ, ಇದೀಗ ಚಾಲಕ ಆಸ್ಪತ್ರೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆಂದು ತಿಳಿದುಬಂದಿದೆ.