ಬೆಂಗಳೂರು: ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ನೇ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ಇದರಿಂದಾಗಿ ನಗರದ ಪ್ರಾಣಿಗಳ ಆಶ್ರಯ ತಾಣಗಳ ಮೇಲಿನ ಹೊರೆ ಹೆಚ್ಚಾಗಿದೆ.
ಅನೇಕ ನಿವಾಸಿ ಕಲ್ಯಾಣ ಸಂಘಗಳು (RWAs) ಬೀದಿ ನಾಯಿಗಳನ್ನು ಸ್ಥಳಾಂತರಿಸುತ್ತಿವೆ. ಇದರಿಂದ ಪರಿಸ್ಥಿತಿ ನಿಭಾಯಿಸಲು ಪ್ರಾಣಿ ಪ್ರಿಯರು ಸಂಕಷ್ಟ ಪಡುತ್ತಿದ್ದಾರೆಂದು ಕಾರ್ಯಕರ್ತರು ಹೇಳಿದ್ದಾರೆ.
ಮೈಲೋಸ್ ರೆಸ್ಕ್ಯೂ ಸಂಸ್ಥಾಪಕಿ ಲಕ್ಷ್ಮಿ ಸ್ವಾಮಿನಾಥನ್ ಅವರು ಮಾತನಾಡಿ, ನ್ಯಾಯಾಲಯದ ಆದೇಶವು ದುರುಪಯೋಗಕ್ಕೆ ಕಾರಣವಾಗಿದೆ. ಆಶ್ರಯ ತಾಣಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ನಿವಾಸಿ ಕಲ್ಯಾಣ ಸಂಘಗಳು ಕಾನೂನನ್ನು ಅರ್ಥಮಾಡಿಕೊಳ್ಳದೆ ನಾಯಿಗಳನ್ನು ಸ್ಥಳಾಂತರಿಸುತ್ತಿವೆ. ಇದರಿಂದ ನಾಪತ್ತೆಯಾದ ಪ್ರಾಣಿಗಳ ಬಗ್ಗೆ ನಮಗೆ ನಿರಂತರ ಕರೆಗಳು ಬರುತ್ತಿವೆ. ಪ್ರತೀಯೊಂದು ಕರೆಯನ್ನು ಸ್ವೀಕರಿಸುವ ಸಾಮರ್ಥ್ಯ ನಮಗಿಲ್ಲ ಎಂದು ಹೇಳಿದ್ದಾರೆ.
ಆಕ್ರಮಣಕಾಗಿ ಹಾಗೂ ಕ್ರೋಧೋನ್ಮತ್ತ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಿಗೆ ರವಾನಿಸಬಹುದು ಎಂದೂ ತಿಳಿಸಿದ್ದಾರೆ.
ನಾಯಿ ರಕ್ಷಕಿ ಶ್ರಾವ್ಯ ಸತ್ಯನಾರಾಯಣ್ ಅವರು ಮಾತನಾಡಿ, ಪರಿಸ್ಥಿತಿಯು ಸಮುದಾಯ ಪ್ರಾಣಿಗಳ ಮೇಲಿನ ದ್ವೇಷವನ್ನು ತೀವ್ರಗೊಳಿಸಿದೆ. ವರ್ಷಗಳಿಂದ ಇರುವ ತಪ್ಪು ಕಲ್ಪನೆಗಳನ್ನು ಈಗ ಸಮರ್ಥನೆ ಎಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಿಜವಾಗಿರುವ ಸಮಸ್ಯೆ ನಾಯಿಗಳಲ್ಲ, ಲಸಿಕೆ ಮತ್ತು ಸಂತಾನಹರಣ ವ್ಯವಸ್ಥೆಗಳ ವೈಫಲ್ಯವಾಗಿರುವುದು. ಈ ಸಮಸ್ಯೆಗೆ ಪರಿಹಾರ ಎಂದರೆ, ಸಾಕುಪ್ರಾಣಿಗಳ ಮಾಲೀಕತ್ವದ ನಿಯಮಗಳನ್ನು ಬಲಪಡಿಸುವುದು ಮತ್ತು ಎಬಿಸಿ ಕಾರ್ಯಕ್ರಮಗಳನ್ನು ಸುಧಾರಿಸುವುದಾಗಿದೆ ಎಂದು ಹೇಳಿದ್ದಾರೆ.
ಸುಮಾರು ಏಳು ವರ್ಷಗಳಿಂದ ತನ್ನ ನೆರೆಹೊರೆಯಲ್ಲಿ ಸುಮಾರು 40 ಬೀದಿ ನಾಯಿಗಳನ್ನು ನೋಡಿಕೊಳ್ಳುತ್ತಿರುವ ವಿನಯ್ ರಾಜ್ ಸೋಮಶೇಖರ್ ಅವರು ಮಾತನಾಡಿ, ಪ್ರತೀನಿತ್ಯ ಆಹಾರ ನೀಡುವ ನಾಯಿಗಳಿಗೆ ಲಸಿಕೆ ಹಾಕಲಾಗುತ್ತದೆ. ಸಂತಾನಹರಣ ಮಾಡಲಾಗುತ್ತದೆ. ಇದು ನಮ್ಮ ದೈನಂದಿನ ಭಾಗವಾಗಿದೆ. ಇದೀಗ ಈ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದು, ಭಾವನಾತ್ಮಕ ಸಂಬಂಧವನ್ನು ಕಡಿತಂದಾಗುತ್ತದೆ. ಕುಟುಂಬವನ್ನೇ ಕಳೆದುಕೊಂಡಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾಯಿಗಳನ್ನು ಹಠಾತ್ ಸ್ಥಳಾಂತರಿಸಿದರೆ, ಅವುಗಳು ಮತ್ತಷ್ಟು ಆಕ್ರಮಣಶೀಲವಾಗುತ್ತವೆ. ಅವುಗಳಿಗೆ ಸುರಕ್ಷತಾ ಸಮಸ್ಯೆ, ಸಂಘರ್ಷಕ್ಕೆ ಕಾರಣವಾಗುತ್ತದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಷ್ಟ ಸಾರ್ವಜನಿಕ ಮಾರ್ಗಸೂಚಿ ಹೊರಡಿಸಬೇಕು. ಜಾಗೃತಿ ಅಭಿಯಾನಗಳು ನಡೆಸಬೇಕು. RWAಗಳು ತಾವೇ ಸ್ವತಃ ನಿರ್ಣಯ ತೆಗೆದುಕೊಳ್ಳುವ ಬದಲು ಕಾನೂನನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.