ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಕನ್ನಡ vs ಹಿಂದಿ ಗಲಾಟೆ ಸುದ್ದಿಗೆ ಗ್ರಾಸವಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಮಾತಾಡು ಎಂದು ಉದ್ಧಟತನ ಪ್ರದರ್ಶಿಸಿದ್ದ ಬುರ್ಖಾಧಾರಿ ಮಹಿಳೆಗೆ 'ಕನ್ನಡತಿ' ಸರಿಯಾಗಿ ಜಾಡಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣವೊಂದರಲ್ಲಿ ಹಿಂದಿಯಲ್ಲಿ ಮಾತನಾಡಿರುವ ಮಹಿಳೆ ಉದ್ಧಟತನ ಪ್ರದರ್ಶಿಸಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ವಿರೋಧ ವ್ಯಕ್ತವಾಗುತ್ತಿದೆ. ನಗರದ ಪ್ರಮುಖ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಭಾಷಾ ವಿಚಾರವಾಗಿ ವಾಕ್ಸಮರ ನಡೆದಿದೆ.
ಬುರ್ಖಾಧಾರಿ ಮಹಿಳೆಯೊಬ್ಬರು ಕನ್ನಡ ಮಾತನಾಡುವ ಮಹಿಳೆಯೊಂದಿಗೆ ಜಗಳಕ್ಕಿಳಿದಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಹಿಂದಿ ಮಾತನಾಡಿ ಎಂದು ಕನ್ನಡದಲ್ಲೇ ಹೇಳಿರುವ ಮಹಿಳೆ, ಮತ್ತೊಬ್ಬ ಕನ್ನಡ ಮಹಿಳೆಯೊಂದಿಗೆ ವಾದಕ್ಕೆ ಇಳಿದಿದ್ದಾಳೆ. ಕನ್ನಡ ಮಾತನಾಡಿ ಎಂದು ಆಗ್ರಹಿಸಿರುವ ಕನ್ನಡತಿಗೆ ನೀವು ಹಿಂದಿಯಲ್ಲಿ ಮಾತನಾಡಿ ಎಂದು ಮಹಿಳೆ ಕನ್ನಡದಲ್ಲೇ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಕನ್ನಡತಿ ಕಾರ್ಯಕ್ಕೆ ಮೆಚ್ಚುಗೆ
ಇನ್ನು ಬುರ್ಖಾದಾರಿ ಮಹಿಳೆಗೆ ಕನ್ನಡ ಪಾಠ ಮಾಡಿದ ಕನ್ನಡತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಕುರಿತು ವಿಡಿಯೋ ಸಹಿತ ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, 'ಮೊದಲನೆಯದಾಗಿ ಕನ್ನಡ ಮಾತಾಡು ಎಂದು ದಿಟ್ಟವಾಗಿ ಧ್ವನಿ ಎತ್ತಿದ ಕನ್ನಡತಿಗೆ ಅಭಿನಂದನೆಗಳು.. ಕನ್ನಡ ನಾಡಲ್ಲಿ ಹಿಂದಿ ಮಾತಾಡು ಅಂತ ದುರಹಂಕಾರ ತೋರುವುದು ಅವಿವೇಕಿತನ ಇದು ಕರ್ನಾಟಕ ನಮ್ಮ ಆಡಳಿತ ಭಾಷೆ ಕನ್ನಡ. ನಮ್ಮದು ಹಿಂದಿ ನಾಡಲ್ಲ.ಹಿಂದಿ ಮಾತಾಡು ಅಂತ ದುರಹಂಕಾರ ತೋರಿದ ಈ ಯುವತಿಗೆ ಧಿಕ್ಕಾರ ಎಂದು ಹೇಳಿದ್ದಾರೆ.