ಇಂದು ನವರಾತ್ರಿ ಉತ್ಸವದ ಕಡೆಯ ದಿನ, ವಿಜಯದಶಮಿ. ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ.
ಈ ದಿನದಂದು ದುರ್ಗಾ ದೇವಿಯು ಮಹಿಷಾಸುರನನ್ನು ಸಂಹರಿಸಿದ ವಿಜಯವನ್ನು ಮತ್ತು ಶ್ರೀರಾಮನು ರಾವಣನನ್ನು ಸೋಲಿಸಿದ ವಿಜಯವನ್ನು ನೆನಪಿಸಲಾಗುತ್ತದೆ. ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ.
ನವರಾತ್ರಿಯ ಒಂಬತ್ತು ದಿನಗಳವರೆಗೆ ದುರ್ಗಾ ದೇವಿಯನ್ನು ಆರಾಧಿಸಿದ ನಂತರ, ಹತ್ತನೇ ದಿನದಂದು ಅವಳ ವಿಜಯವನ್ನು ಸಂಭ್ರಮಿಸಲಾಗುತ್ತದೆ.
ರಾಮಲೀಲಾ ಎಂಬ ಹೆಸರಿನಲ್ಲಿ ರಾಮಾಯಣದ ಪ್ರಮುಖ ಘಟನೆಗಳನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ, ಅಲ್ಲಿ ರಾವಣನ ದೊಡ್ಡ ಪ್ರತಿಕೃತಿಗಳನ್ನು ಸುಡಲಾಗುತ್ತದೆ, ಇದು ದುಷ್ಟರ ಮೇಲೆ ಒಳಿತಿನ ವಿಜಯವನ್ನು ಪ್ರತಿನಿಧಿಸುತ್ತದೆ.
ಬೊಮ್ಮಾಯಿ ಕೋಲು ಎಂಬ ಆಚರಣೆಯ ಮೂಲಕ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಈ ಸಮಯದಲ್ಲಿ ಗೊಂಬೆಗಳನ್ನು ಜೋಡಿಸಿ ಪ್ರದರ್ಶಿಸುವ ಸಂಪ್ರದಾಯವಿದೆ.
ರಾಮಾಯಣ ಕಥೆಯ ಹಿನ್ನೆಲೆ
ವಿಜಯದಶಮಿ ಹಬ್ಬವು ರಾಮಾಯಣದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ಭಗವಾನ್ ರಾಮನು ರಾಕ್ಷಸ ರಾಜ ರಾವಣನನ್ನು ಸಂಹಾರ ಮಾಡುವ ಮೂಲಕ ಕೆಟ್ಟದರ ಮೇಲೆ ಒಳಿತಿನ ವಿಜಯದ ಸಂಕೇತವನ್ನು ಸೂಚಿಸುವ ದಿನ.
ಈ ಶುಭ ದಿನವು ಲಂಕಾದ ವಿಜಯವನ್ನು ಸಂಕೇತಿಸುತ್ತದೆ. ರಾಮ, ಸೀತೆ ಮತ್ತು ಲಕ್ಷ್ಮಣ ಕಾಡಿನಲ್ಲಿರುವ ಸಮಯದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದುಕೊಂಡು ಹೋಗುತ್ತಾನೆ. ನಂತರ ರಾಮನು ಲಂಕಾಧಿಪತಿಯನ್ನು ಸಂಹಾರ ಮಾಡಿ ಸೀತೆಯನ್ನು ಕರೆದುಕೊಂಡು ಬರುತ್ತಾನೆ. ಬಳಿಕ ಅವನು ಅಯೋಧ್ಯೆಗೆ ಹಿಂದಿರುಗುತ್ತಾನೆ. ಇದು ದುಷ್ಟತನದ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ.
ದಸರಾ ಎಂಬ ಪದವು ಸಂಸ್ಕೃತದಿಂದ ಹುಟ್ಟಿಕೊಂಡಿದೆ, ಇದರ ಅರ್ಥ "ಹತ್ತು ದುಷ್ಟ ಮುಖಗಳ ನಾಶ". ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣುವಿನ ಎಂಟನೇ ಅವತಾರವಾದ ಭಗವಾನ್ ರಾಮನು ಪತ್ನಿ ಸೀತೆಯನ್ನು ಅಪಹರಿಸಿದ ನಂತರ ರಾವಣನನ್ನು ಸೋಲಿಸಿದನು. ಈ ದಿನವು ಒಂಬತ್ತು ದಿನಗಳ ನವರಾತ್ರಿ ಹಬ್ಬದ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಇದು ಮಹಿಷಾಸುರನ ಮೇಲೆ ದುರ್ಗಾ ದೇವಿಯ ವಿಜಯವನ್ನು ಆಚರಿಸುವಂತಹ ದಿನವಾಗಿದೆ.
ಈ ವರ್ಷ, ದಸರಾ ಅಥವಾ ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ.
ವಿಜಯದಶಮಿ ಪೂಜೆ ಹೇಗೆ?
ಶಮಿ ಮರವನ್ನು ವಿಜಯ ದಶಮಿ ಅಥವಾ ದಸರಾ ದಿನದಂದು ಪೂಜಿಸಲಾಗುತ್ತದೆ. ಅರ್ಜುನನು ತನ್ನ ಆಯುಧಗಳನ್ನು ಅದರಲ್ಲಿ ಅಡಗಿಸಿಟ್ಟಿದ್ದನು ಎಂಬ ಕಥೆಯಿದೆ. ದಕ್ಷಿಣ ಭಾರತದಲ್ಲಿ, ಶಮಿ ಪೂಜೆ, ಬನ್ನಿ ಪೂಜೆ ಎಂದು ಕರೆಯಲಾಗುತ್ತದೆ. ದಸರಾ ಹಬ್ಬದ ದಿನದಂದು ಶಮಿ ಗಿಡವನ್ನು ಪೂಜಿಸಲಾಗುತ್ತದೆ.
ಅಕ್ಷರಾಭ್ಯಾಸ
ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ, ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಪ್ರಾರಂಭಿಸುವ (ವಿದ್ಯಾರಂಭಮ್) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಜ್ಞಾನ ಮತ್ತು ಕಲೆಗಳ ದೇವತೆಯಾದ ಸರಸ್ವತಿ ದೇವಿಯನ್ನು ಆರಾಧಿಸುವುದರ ಮೂಲಕ ಪುಟ್ಟ ಮಕ್ಕಳಿಗೆ ಪ್ರಥಮಥಃ ಅಕ್ಷರ ಬರೆಸುವ ಮೂಲಕ ಉತ್ತಮ ವಿದ್ಯಾಬುದ್ಧಿಯ ಸಲುವಾಗಿ ಪ್ರಾರ್ಥಿಸುತ್ತೇವೆ.
ಮೈಸೂರಿನಲ್ಲಿ ಜಂಬೂ ಸವಾರಿ
ಇಂದು ನಾಡಿಗೆ ನಾಡೇ ಬಹಳ ಕಾತರದಿಂದ ಕಾಯುತ್ತಿರುವ ಮೈಸೂರು ಅರಮನೆ ಮುಂಭಾಗ ಜಂಬೂಸವಾರಿ ನಡೆಯಲಿದ್ದು, ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ.
ಜಂಬೂಸವಾರಿ ಮೆರವಣಿಗೆಗೆ ಸಕಲ ಸಿದ್ಧತೆಗಳು ನಡೆದಿವೆ. ದಸರಾ ಆನೆ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ. ಜಂಬೂಸವಾರಿ ಮೆರವಣಿಗೆಯ ಪ್ರಮುಖ ಭಾಗವಾದ ಚಿನ್ನದ ಅಂಬಾರಿ ಅರಮನೆ ಆವರಣದಲ್ಲಿ ಸಿದ್ಧಗೊಂಡಿದೆ.
ಜಂಬೂಸವಾರಿ ಜೊತೆಗೆ ಮೆರವಣಿಗೆಯಲ್ಲಿ ಸುಮಾರು 60 ಸ್ತಬ್ಧ ಚಿತ್ರಗಳು ಸಾಗಲಿದ್ದು, ಕಳೆದ 14 ದಿನಗಳಿಂದ ಇವುಗಳ ತಯಾರಿಯಲ್ಲಿ ಕಲಾವಿದರು ನಿರತರಾಗಿದ್ದಾರೆ. ಬೀದರ್ ಕೋಟೆ, ಹಂಪಿ ವಿರೂಪಾಕ್ಷ ದೇಗುಲ, ಗಾಧೀಜಿ ಮತ್ತು ಬಸವಣ್ಣನವರ ಪ್ರತಿಮೆಗಳು ಸೇರಿ ವಿವಿಧ ಟ್ಯಾಬ್ಲೋಗಳು ಮೆರವಣಿಗೆಗಾಗಿ ಸಿದ್ಧಗೊಂಡಿವೆ.
ಇಂದು ಮದ್ಯಾಹ್ನ 1 ಗಂಟೆಯಿಂದ 1.18 ರವರೆಗೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಶುಭ ಧನುರ್ ಲಗ್ನದಲ್ಲಿ ನಂದಿದ್ವಜದ ಪೂಜೆ ನಡೆಯಲಿದೆ. ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜದ ಪೂಜೆ ನೆರವೇರಿಸಲಾಗುವುದು.
ಸಂಜೆ 4:42 ರಿಂದ 5.06 ರೊಳಗೆ ಜಂಬೂಸವಾರಿಗೆ ಚಾಲನೆ ನೀಡಲಾಗುವುದು. ಶುಭ ಕುಂಭಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಗಣ್ಯರು ಸೇರಿದಂತೆ ಲಕ್ಷಾಂತರ ಜನ ಜಂಬೂ ಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.