ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ವಿಜಯದಶಮಿ ಜಂಬೂ ಸವಾರಿಯೊಂದಿಗೆ ನವರಾತ್ರಿ ಹಬ್ಬ ಮುಕ್ತಾಯವಾಗುತ್ತಿದೆ.
ಈ ವರ್ಷ 11 ದಿನ ದಸರಾ ಆಚರಣೆ ಕಂಡಿದೆ. ಇಷ್ಟು ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅರಮನೆಯಲ್ಲಿ ಖಾಸಗಿ ದರ್ಬಾರ ನಡೆಯಿತು. ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಇಂದು ವಿಜಯದಶಮಿ ಅಥವಾ ದಸರಾ ನಿಮಿತ್ತ ಮೈಸೂರಿನಲ್ಲಿ ಜಂಬೂಸವಾರಿ ನಡೆಯುತ್ತದೆ.
ಯದುವೀರ್ ಒಡೆಯರ್ ರಿಂದ ಶಮಿ ಪೂಜೆ: ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದ ಬನ್ನಿಮಂಟಪದಲ್ಲಿ ಇಂದು ಮಧ್ಯಾಹ್ನ ಜಂಬೂ ಸವಾರಿಗೆ ಮುನ್ನ ಶಮಿ ಪೂಜೆ ನಡೆಯಿತು. ರಾಜ ಯದುವೀರ್ ಒಡೆಯರ್ ಶಮಿ ಪೂಜೆ ನೆರವೇರಿಸಿದರು.
ವಜ್ರಮುಷ್ಠಿ ಕಾಳಗ ಮುಕ್ತಾಯವಾಗುತ್ತಿದ್ದಂತೆ ಭುವನೇಶ್ವರಿ ದೇವಾಲಯದವರೆಗೆ ವಿಜಯಯಾತ್ರೆ ನಡೆಯಿತು. ಬಳಿಕ ಯದುವೀರ್ ಒಡೆಯರ್, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಪೂಜೆ ಮುಕ್ತಾಯವಾಗುತ್ತಿದ್ದಂತೆ ಯದುವೀರ್ ಅರಮನೆಗೆ ವಾಪಸ್ ಆದರು. ಇದರೊಂದಿಗೆ ಅರಮನೆ ದಸರಾ ಮುಕ್ತಾಯಗೊಂಡಿದೆ.
ಪೊಲೀಸ್ ಬ್ಯಾಂಡ್ ಜೊತೆಗೆ ಪಟ್ಟದ ಆನೆ, ಕುದುರೆ, ಹಸು ವಿಜಯಯಾತ್ರೆಯಲ್ಲಿ ಭಾಗಿಯಾಗಿದ್ದವು. ಖಾಸಾ ಆಯುಧಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಶ್ರೀಕಂಠದತ್ತ ಒಡೆಯರ್ ಬಳಸುತ್ತಿದ್ದ ಕಾರಿನಲ್ಲಿ ಯದುವೀರ್ ವಿಜಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ಜಂಬೂ ಸವಾರಿಯಲ್ಲಿ 58 ಸ್ತಬ್ದಚಿತ್ರಗಳು ಪ್ರದರ್ಶನಗೊಳ್ಳಲಿದೆ. 100ಕ್ಕೂ ಹೆಚ್ಚು ಕಲಾ ತಂಡಗಳು, 60ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಹಾಗೂ ಪೊಲೀಸ್ ತುಕಡಿಗಳು ಸಾಗಲಿವೆ.
ಜಂಬೂ ಸವಾರಿ
ಕುಂಭ ಲಗ್ನದಲ್ಲಿ ಸಂಜೆ 4.42ರಿಂದ 5.06 ವರೆಗಿನ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ತಾಯಿಗೆ ಸಿಎಂ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭಗೊಳ್ಳಲಿದೆ. 6ನೇ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊರಲಿದೆ. ಅಭಿಮನ್ಯುಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಲಿವೆ. ಜಂಬೂ ಸವಾರಿ ವೀಕ್ಷಣೆಗಾಗಿ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸುಮಾರು 45 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.