ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಿಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್ಎಫ್) ಅಧಿಕಾರಿಗಳ ನಡುವಿನ ಭಾನುವಾರ ಜಟಾಪಟಿ ನಡೆದಿದ್ದು, ಅಧಿಕಾರಿಗಳ ದುರ್ವರ್ತನೆ ಹಾಗೂ ಆರೋಪಗಳ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಹಂದಿಗುಂದ ಗ್ರಾಮದ ನಿವಾಸಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಭೀಮಪ್ಪ ಬನಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಸ್ವಪ್ನಾ ಮಲ್ಲಿಕಾರ್ಜುನ್ ಉಳ್ಳಾಗಡ್ಡಿ ಅವರ ಮೇಲೆ ಕರ್ತವ್ಯದ ಸಮಯದಲ್ಲಿ ದುರ್ವರ್ತನೆ ಮತ್ತು ಹಲ್ಲೆ ಆರೋಪ ಹೊರಿಸಿದ್ದರು.
ಇದಕ್ಕೆ ಪ್ರತಿಯಾಗಿ ಸ್ವಪ್ನಾ ಮಲ್ಲಿಕಾರ್ಜುನ್ ಉಳ್ಳಾಗಡ್ಡಿ ಅವರೂ ಆರೋಪ ಮಾಡಿದ್ದಾರೆ. ಭೀಮಪ್ಪ ಅವರು ಅನುಚಿತವಾಗಿ ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದು, ಜೀವ ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಾರೆ.
ಈ ನಡುವೆ, ಪೊಲೀಸ್ ಇನ್ಸ್‌ಪೆಕ್ಟರ್ ಸ್ವಪ್ನಾ ಉಳ್ಳಾಗಡ್ಡಿ ಅವರು, ಅಕ್ಟೋಬರ್ 4, 2025 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹಿಂಡಲಗಾ ಕೇಂದ್ರ ಕಾರಾಗೃಹದ ಕಚೇರಿಯೊಳಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಭೀಮಪ್ಪ ಬನಾಜ್ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಕತ್ತು ಹಿಸುಕಲು ಯತ್ನಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಅಧಿಕೃತ ವಿಷಯಗಳ ಕುರಿತು ನಡೆದ ಮಾತಿನ ಚಕಮಕಿ ವೇಳೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿ, ಹೊಡೆದಿದ್ದಾರೆ. ಕುತ್ತಿಗೆಯನ್ನು ಹಿಡಿದು ಕತ್ತು ಹಿಸುಕಲು ಪ್ರಯತ್ನಿಸಿದರು. ಅಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದರು ಎಂದು ತಿಳಿಸಿದ್ದಾರೆ.
ದೂರು ಬೆನ್ನಲ್ಲೇ ಪರಶುರಾಮ್ ಭೀಮಪ್ಪ ಬನಾಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109(1), 115(2), 126(2), 352, 351(2), 351(3), ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಭೀಮಪ್ಪ ಅವರು ಸ್ವಪ್ವಾ ವಿರುದ್ಧ ದೂರು ದಾಖಲಿಸಿದ್ದಾರೆ.
ಈತನ್ಮಧ್ಯೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ್ ದಳವಾಯಿ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.