ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಶೆಟ್ಟಿಗೆರೆಯಲ್ಲಿ ಕಾರುಗಳ ನಿಲ್ಲಿಸಿ ರಸ್ತೆಬದಿಯ ಟೀ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಇಬ್ಬರು ಕ್ಯಾಬ್ ಚಾಲಕರ ಮೇಲೆ 10ಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದು, ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಾಳಿಗೊಳಗಾದ ಚಾಲಕರನ್ನು ಜ್ಞಾನಭಾರತಿ ಬಳಿಯ ಮರಿಯಪ್ಪನ ಪಾಳ್ಯದ ಕೆ.ಎಸ್. ಬಸವರಾಜು (37) ಮತ್ತು ಕೆ.ಎಸ್. ಲೇಔಟ್ 1ನೇ ಹಂತದ ಜನಾರ್ದನ್ (29) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಚಾಲಕನ ಕಾರಿಗೂ ಹಾನಿಯಾಗಿದೆ. ಕಾರಿನ ವಿಂಡ್ ಶೀಲ್ಡ್ ಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ. ಇದೀಗ ಇಬ್ಬರೂ ಚಾಲಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏತನ್ಮಧ್ಯೆ ಸ್ಥಳದಲ್ಲಿ ಪೊಲೀಸರು ಇದ್ದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳೂ ಕೂಡ ಕೇಳಿ ಬಂದಿದೆ.
ಸ್ಥಳಕ್ಕೆ ಬಂದ ಕೆಲ ಸ್ಥಳೀಯರು ವಿಚಾರವನ್ನು ದೊಡ್ಡದು ಮಾಡದಂತೆ, ಮಾಡಿದರೆ, ಕ್ಯಾಬ್ ಓಡಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆಂದು ಹಲ್ಲೆಗೊಳಗಾದ ಚಾಲಕರು ಆರೋಪಿಸಿದ್ದಾರೆ.
ಆರೋಪಿಗಳು ಬಿಳಿ ಬಣ್ಣದ i20 ಕಾರಿನಲ್ಲಿ ಬಂದು ನಿರಂತರವಾಗಿ ಹಾರ್ನ್ ಮಾಡಲು ಪ್ರಾರಂಭಿಸಿದರು. ನಮ್ಮ ಕಾರುಗಳು ರಸ್ತೆ ಅಡ್ಡಿಯಾಗಿರಲಿಲ್ಲ. ಹೀಗಾಗಿ ನಾವು ಕಾರು ತೆಗೆಯಲಿಲ್ಲ. ಹೀಗಾಗಿ ಕುಪಿತಗೊಂಡ ಆರೋಪಿಗಳು ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ಬಳಿಕ ಜನಾರ್ಧನ್ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದರು. ಜನಾರ್ಥನ್ ಅವರಿಗೆ ತೀವ್ರ ರಕ್ತಸ್ತಾವವಾಗುತ್ತಿತ್ತು. ನಂತರ ನನ್ನ ಮೇಲೂ ಹಲ್ಲೆ ನಡೆಸಿದರು ಎಂದು ಬಸವರಾಜು ಅವರು ಹೇಳಿದ್ದಾರೆ.
ಇಬ್ಬರೂ ಚಾಲಕರೂ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗ ಕೆ.ದೇವೇಗೌಡ ಎಂಬಾತನನ್ನು ಬಂಧಿಸಲಾಗಿದೆ. ಅವರ ಕಾರನ್ನೂ ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.