ಕೊಪ್ಪಳ: ಪ್ರತ್ಯೇಕ ಧರ್ಮದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯನವರು ಸಚಿವ ಶಿವರಾಜ್ ತಂಗಡಗಿ ಮೇಲೆ ಕೋಪಗೊಂಡ ಪ್ರಸಂಗ ನಡೆದಿದೆ.
ಪ್ರತ್ಯೇಕ ಧರ್ಮದ ಬಗ್ಗೆ ಮುನ್ನಲೆಯೂ ಇಲ್ಲ, ಹಿನ್ನೆಲೆಯೂ ಇಲ್ಲ, ಅದರಲ್ಲಿ ನನ್ನ ನಿಲುವು ಏನೂ ಇಲ್ಲ, ಕೆಲವು ವಿರಕ್ತ ಸ್ವಾಮೀಜಿಗಳು ಮಾತನಾಡುತ್ತಿದ್ದಾರೆ ಎಂದು ಕೊಪ್ಪಳದಲ್ಲಿ ನಿನ್ನೆ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದರು.
ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಕೂಗು ವಿಚಾರ ಪ್ರಸ್ತಾಪವಾಗಿದೆ. ಈ ಬಗ್ಗೆ ನಿಮ್ಮ ನಿಲುವು ಏನು ಎಂದು ವರದಿಗಾರರು ಕೇಳಿದ ಪ್ರಶ್ನೆಯನ್ನು ಸಚಿವ ತಂಗಡಗಿ ಸಿಎಂಗೆ ಪುನರುಚ್ಛರಿಸಿದ್ದಾರೆ. ಈ ವೇಳೆ ಗರಂ ಆದ ಸಿಎಂ ಅದರಲ್ಲಿ ನನ್ನ ನಿಲುವೇನಿಲ್ಲ. ಪ್ರತ್ಯೇಕ ಧರ್ಮದ ಬಗ್ಗೆ ಮುನ್ನೆಲೆ ಇಲ್ಲ, ಹಿನ್ನೆಲೆಯೂ ಇಲ್ಲ. ಕೆಲವು ವಿರಕ್ತ ಸ್ವಾಮೀಜಿಗಳು ಅದರ ಬಗ್ಗೆ ಮಾತನಾಡುತ್ತಿದ್ದಾರೆ, ಅವರು ಏನು ಬರೆಸುತ್ತಾರೆ ಅದನ್ನು ನಾವು ಬರೆದುಕೊಳ್ಳುತ್ತೇವೆ ಎಂದಿದ್ದಾರೆ.
ಬಿಜೆಪಿಗೆ ಸಿದ್ದರಾಮಯ್ಯ ಸವಾಲ್
ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದರೂ ವಿಪಕ್ಷಗಳು ನಮ್ಮ ಮೇಲೆ ಆರೋಪ ಮಾಡುತ್ತಿವೆ. ಗ್ಯಾರಂಟಿಗಳಿಂದ ಸರ್ಕಾರದ ಬಳಿ ದುಡ್ಡಿಲ್ಲದ ಕಾರಣ ಅಭಿವೃದ್ಧಿ ಕೆಲಸಗಳು ನಿಂತಿವೆ ಎಂದು ಆರೋಪಿಸುತ್ತಾರೆ. ಸರ್ಕಾರದ ಬಳಿ ದುಡ್ಡು ಇಲ್ಲದಿದ್ದರೆ ಕೊಪ್ಪಳದಲ್ಲಿಯೇ 2 ಸಾವಿರ ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳನ್ನ ಮಾಡಲು ಆಗುತ್ತಿತ್ತಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ 1 ಲಕ್ಷ ಕೋಟಿ ಕೊಟ್ಟಿದ್ದು, ಬಿಜೆಪಿಯವರು ಚರ್ಚೆಗೆ ಬರಲಿ. ನಾನು ಲೆಕ್ಕ ಕೊಡಲು ತಯಾರಿದ್ದೇನೆ. ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದರು.