ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನಾಳೆಯಿಂದ ಅಕ್ಟೋಬರ್ 18ರವರೆಗೆ ದಸರಾ ರಜೆಯನ್ನು ಸರ್ಕಾರ ವಿಸ್ತರಣೆ ಮಾಡಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ಇಂದು ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಹೀಗಾಗಿ ಸಂಪುಟ ಸಹೋದ್ಯೋಗಿಗಳೊಂದಿಗೆ ಮುಖ್ಯಮಂತ್ರಿ ಚರ್ಚಿಸಿದ ನಂತರ ಮತ್ತೆ 10 ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರೆ, ಕೆಲವು ಕಡೆಗಳಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಶೇ. 97, ಉಡುಪಿಯಲ್ಲಿ ಶೇ. 63, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 60 ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಯಲ್ಲಿ ತೊಡಗಿಸಿಕೊಂಡವರು ಸಮೀಕ್ಷೆಯಲ್ಲಿ ಭಾಗವಹಿಸುವಂತಿಲ್ಲ. ಸರ್ವೇ ಕಾರ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ರೂ. 20 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಎಂದು ಸಿಎಂ ಇದೇ ವೇಳೆ ತಿಳಿಸಿದ್ದಾರೆ.
ಕನ್ನಡ ಬಿಗ್ ಬಾಸ್ ನ 12ನೇ ಆವೃತ್ತಿಗೆ ಸಂಕಷ್ಟ ಎದುರಾಗಿದೆ. ಈ ಕೂಡಲೇ ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ಜಾಲಿವುಡ್ ಮ್ಯಾನೇಜ್ಮೆಂಟ್ ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ದು, ಬೀಗ ಹಾಕಿ, ವಿದ್ಯುತ್, ನೀರಿನ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರು ಬಳಕೆ ಮಾಡುತ್ತಿದ್ದು, ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡದ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ದು, ಸ್ಥಳದಲ್ಲಿನ ಎಲ್ಲಾ ಚಟುವಟಿಕೆಗಳನ್ನು ತಕ್ಷಣದಿಂದಲೇ ನಿಲ್ಲಿಸಲು ಮತ್ತು ನಿಗದಿತ ಅವಧಿಯೊಳಗೆ ಕಚೇರಿಗೆ ವಿವರಣೆಯನ್ನು ಸಲ್ಲಿಸಬೇಕು, ಸ್ಪರ್ಧಿಗಳು, ಸಿಬ್ಬಂದಿಗಳನ್ನು ತಕ್ಷಣವೇ ಸ್ಥಳದಿಂದ ತೆರವುಗೊಳಿಸಬೇಕೆಂದು ಸೂಚಿಸಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಅವರಿಗೆ SC ಜಾತಿ ಪ್ರಮಾಣಪತ್ರ ನೀಡಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 101 ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಯಾರೇ ಆದರೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಇದು ಅನ್ವಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶದಲ್ಲಿ ತಿಳಿಸಿದೆ. ಪರಿಶಿಷ್ಟ ಜಾತಿ ಪ್ರಮಾಣಪತ್ರಗಳ ಅರ್ಜಿಗಳ ಧರ್ಮದ ಕಾಲಂನಲ್ಲಿ 'ಬೌದ್ಧ ಧರ್ಮ' ಎಂದು ನಮೂದಿಸಲು ಆದೇಶ ಅವಕಾಶ ನೀಡುತ್ತದೆ.
ಇತ್ತೀಚಿಗೆ ಬಿಡುಗಡೆಯಾದ ರಿಷಭ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ವೀಕ್ಷಿಸುವ ವೇಳೆ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತುಳು ಕೂಟದ ಕೆಂಗಣ್ಣಿಗೆ ಗುರಿಯಾಗಿದೆ. ಥಿಯೇಟರ್‌ಗಳಲ್ಲಿ ದೈವದ ವೇಷ ಧರಿಸಿ ಓಡಾಟ, ಚಿತ್ರದಲ್ಲಿ ತೋರಿಸುವ ದೈವದ ವರ್ತನೆಗಳಂತೆ ಚಿತ್ರಮಂದಿರಗಳಲ್ಲಿ ಕೂಗುವುದು ತುಳು ಜನತೆಯ ನಂಬಿಕೆಗೆ ಧಕ್ಕೆಯಾಗುತ್ತಿದ್ದು ಈ ವಿಷಯವಾಗಿ ತುಳು ಕೂಟ ರಿಷಭ್ ಶೆಟ್ಟಿಗೆ ಪತ್ರ ಬರೆದಿದೆ. ಈ ರೀತಿ ಮಾಡದಂತೆ ಅಭಿಮಾನಿಗಳಿಗೆ ಬುದ್ಧಿ ಹೇಳಿ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಹುಚ್ಚಾಟ ಮಾಡುವವರಿಗೆ ಎಚ್ಚರಿಕೆ ಕೂಡ ನೀಡಲಾಗಿದೆ. ಈ ಹಿಂದೆ ಕಾಂತಾರ ಮೊದಲ ಭಾಗ ಬಿಡುಗಡೆಯಾದಾಗಲೂ ಎಲ್ಲೆಂದರಲ್ಲಿ ದೈವದ ವೇಷ ಧರಿಸಿ, ಅದರ ಅನುಕರಣೆ ಮಾಡುತ್ತಿದ್ದವರ ವಿರುದ್ಧ ಕ್ರಮಕ್ಕೆ ತುಳುಕೂಟ ಮನವಿ ಮಾಡಿತ್ತು.
ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ನಿರ್ಮಾಪಕ ಹೇಮಂತ್ ಕುಮಾರ್ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ರಿಚ್ಚಿ ಸಿನಿಮಾದ ಶೂಟಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಿಗ್ ಬಾಸ್ 11 ಸ್ಪರ್ಧಿಯೊಬ್ಬರು ದೂರು ನೀಡಿದ್ದರು. ನಟಿಗೆ 2022ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಆರೋಪಿ ಪರಿಚಯವಾಗಿದ್ದರು. ‘ರಿಚ್ಚಿ ಹೆಸರಿನ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನಾಯಕಿಯಾಗಿ ನಟಿಸಬೇಕು ಎಂದು ಹೇಮಂತ್ ನಟಿಯನ್ನು ಕೋರಿದ್ದರು. ₹2 ಲಕ್ಷ ಸಂಭಾವನೆ ನೀಡುವುದಾಗಿ ಮಾತುಕತೆ ನಡೆದು ಚಿತ್ರೀಕರಣ ಆರಂಭವಾಗಿತ್ತು. ಕಾರಣಾಂತರಗಳಿಂದ ಆರೋಪಿ ಸಿನಿಮಾ ಚಿತ್ರೀಕರಣವನ್ನು ಮುಂದೂಡಿದ್ದರು. ಚಿತ್ರೀಕರಣದ ಅವಧಿಯಲ್ಲಿ ಆರೋಪಿ ಅಸಭ್ಯ ರೀತಿಯಲ್ಲಿ ಸ್ಪರ್ಶಿಸುತ್ತಿದ್ದರು’ ಎಂದು ದೂರು ನೀಡಲಾಗಿದೆ.