ಬಳ್ಳಾರಿ: ನೂರಾರು ಕಾರುಗಳನ್ನು ಬಾಡಿಗೆ ಪಡೆದು, ಕಡಿಮೆ ದರಕ್ಕೆ ಮಾರಾಟ ಮಾಡಿ ಸಿನಿಮೀಯ ರೀತಿಯಲ್ಲಿ ವಂಚನೆ ಮಾಡಿರುವ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ.
ರಾಯಚೂರು ಮೂಲದ ಸಿಂಧನೂರು ಮೂಲದ ಮೊಹಮ್ಮದ್ ಜಾಹಿದ್ ಬಾಷಾ ಅಲಿಯಾಸ್ ಸೋನು ವಂಚಿಸಿದ ಆರೋಪಿಯಾಗಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತಿಂಗಳಿಗೆ 50-60 ಸಾವಿರ ರೂ. ಬಾಡಿಗೆ ನೀಡುವುದಾಗಿದ್ದ ಹೇಳಿ ಮಾಲೀಕರಿಂದ ಕಾರುಗಳನ್ನು ಬಾಡಿಗೆ ಪಡೆಯುತ್ತಿದ್ದ ಆರೋಪಿ, ನಂತರ ಅವುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಆರಂಭದಲ್ಲಿ ಕಾರುಗಳ ಮಾಲೀಕರಿಗೆ ಒಂದು ತಿಂಗಳು ಬಾಡಿಗೆ ಕೊಡುತ್ತಿದ್ದ ಆರೋಪಿ, ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಕಾರು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ತನಿಖೆಗೆ ಇಳಿದಾಗ ಜಹೀದ್ 120 ಕಾರುಗಳ ಮಾಲೀಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿ ನಿರ್ಮಾಣ ಸಂಸ್ಥೆಗಳನ್ನು ಹೊಂದಿರುವ, ಬ್ಯಾಂಕ್ ಗಳಲ್ಲಿ ಕೆಲಸ ಮಾಡುವ ರಾಯಚೂರು ಹಾಗೂ ಕೊಪ್ಪಳದ ಸಾಕಷ್ಟು ಜನರಿಗೆ ವಂಚನೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಆರೋಪಿ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್, ಬ್ರೂಸ್‌ಪೇಟೆ, ಗಾಂಧಿನಗರ ಮತ್ತು ಎಪಿಎಂಸಿ ಪೊಲೀಸ್ ಠಾಣೆಗಳಲ್ಲಿ ಹಲವಾರು ಎಫ್ಐಆರ್ ಗಳು ದಾಖಲಾಗಿವೆ.
ಆರೋಪಿ ವಾಹನಗಳನ್ನೂ ಹಿಂದಿರುಗಿಸಿಲ್ಲ, ಬಾಡಿಗೆಯನ್ನೂ ಪಾವತಿಸಿಲ್ಲ. ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಬಳಸಿಕೊಂಡು ಈ ವರೆಡೂ 44 ವಾಹನಗಳನ್ನು ಪತ್ತೆ ಹಚ್ಚಲಾಗಿದೆ. ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ ತಿಳಿಯದೆ ಕಡಿಮೆ ಬೆಲೆಗೆ ವಾಹನ ಖರೀದಿಸಿದವರಿಗೆ ಬಳ್ಳಾರಿಯ ಎಸ್ಪಿ ಶೋಭಾ ರಾಣಿ ವಿ ಜೆ ಎಚ್ಚರಿಕೆ ನೀಡಿದ್ದು, ಕದ್ದ ವಸ್ತುಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ.
ಕಾನೂನು ಪರಿಣಾಮಗಳಿಂದ ತಪ್ಪಿಸಿಕೊಳ್ಳಬೇಕಿದ್ದರೆ ಖರೀದಿದಾರರು ಸ್ವಯಂಪ್ರೇರಣೆಯಿಂದ ವಾಹನಗಳನ್ನು ಹಿಂತಿರುಗಿಸಬೇಕೆಂದು ಒತ್ತಾಯಿಸಿದ್ದಾರೆ.