ಬೆಂಗಳೂರು: ನಗರದಲ್ಲಿ ಪ್ರತೀದಿನ ಸುಮಾರು 2 ಲಕ್ಷ ಮನೆಗಳ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಅ.8ರಿಂದ ನಿತ್ಯ 3 ಲಕ್ಷ ಮನೆಗಳ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವ ಗಣತಿದಾರರಿಗೆ ದಿನಕ್ಕೆ 200 ರು. ಪ್ರಯಾಣ ಭತ್ಯೆ ನೀಡಲಾಗುವುದು. ಸಮೀಕ್ಷೆಯಲ್ಲಿ ಭಾಗವಹಿಸದ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸಮೀಕ್ಷೆ ವೇಳೆ ಮತದಾರರು ಗುರುತಿನ ಚೀಟಿ ತೋರಿಸುವ ಅಗತ್ಯವಿಲ್ಲ ಆದರೆ, ಆಧಾರ್ ಗುರುತಿನ ಚೀಟಿ ತೋರಿಸಬೇಕು. ಮುಖ್ಯಮಂತ್ರಿಗಳ ಸೂಚನೆಯಂತೆ ಸಮೀಕ್ಷೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕಿದ್ದು, ಈ ನಿಟ್ಟಿನಲ್ಲಿ ದೈನಂದಿನ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ನಗರದಲ್ಲಿ ಸದ್ಯ ಪ್ರತಿ ದಿನ ಸುಮಾರು 2 ಲಕ್ಷ ಮನೆಗಳ ಸರ್ವೇ ಕಾರ್ಯ ನಡೆಯುತ್ತಿದೆ. ಬುಧವಾರದಿಂದ ಸುಮಾರು 3 ಲಕ್ಷ ಮನೆ ಗಳ ಸರ್ವೇ ನಡೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈಗಾಗಲೇ ಸಮೀಕ್ಷೆಗೆ ನಿಯೋಜನೆಗೊಂಡವರ ಪೈಕಿ ಆರೋಗ್ಯ ಸಮಸ್ಯೆ, ಬಾಣತಿಯರು ಸೇರಿದಂತೆ ವಿವಿಧ ಕಾರಣದಿಂದ ಸುಮಾರು 5,500 ಮಂದಿಗೆ ವಿನಾಯಿತಿ ನೀಡಲಾಗಿದೆ. ಆರೋಗ್ಯ ಸಮಸ್ಯೆ ಇರುವವರಿಗೆ ವಿನಾಯಿತಿ ನೀಡಲಾಗುವುದು. ತಪ್ಪು ಮಾಹಿತಿ ನೀಡಿ ಸಮೀಕ್ಷೆ ಕಾರ್ಯದಿಂದ ತಪ್ಪಿಸಿಕೊಳ್ಳುವವರಿಗೆ ನೋಟಿಸ್ ನೀಡಿ ಇಲಾಖಾ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ 18 ಸಾವಿರಕ್ಕೂ ಅಧಿಕ ಸಿಬ್ಬಂದಿ ಸಮೀಕ್ಷೆಗೆ ಹಾಜರಾಗಿದ್ದಾರೆ. ಸುಮಾರು 5,000 ಜನರು ಆರೋಗ್ಯ, ತುರ್ತು ಪರಿಸ್ಥಿತಿ ಮತ್ತು ಹೆರಿಗೆ, ಬಾಣಂತಿ ಸೇರಿ ಇತರ ಕಾರಣಗಳನ್ನು ಉಲ್ಲೇಖಿಸಿ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಚುನಾವಣೆ ಸಮಯದಲ್ಲಿ ಕೆಲವು ಸಿಬ್ಬಂದಿಗಳು ಗೈರು ಹಾಜರಾಗಿದ್ದರು. ಆಗ ಕ್ರಮ ಕೈಗೊಳ್ಳಲಾಗಿತ್ತು. ಸಿಬ್ಬಂದಿಗಳಿಗೆ ನೋಟಿಸ್ ನೀಡಲಾಗಿತ್ತು. ಸಿಬ್ಬಂದಿಗಳ ಮೊಬೈಲ್ ಫೋನ್ ಗಳಿಗೆ ಎಸ್ಎಂಎಸ್ ಕಳುಹಿಸಲಾಗಿದ್ದು, ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈವರೆಗೆ ಒಟ್ಟು 4.13 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ನಗರದಲ್ಲಿ ಸುಮಾರು 46 ಲಕ್ಷ ಮನೆಗಳಿಗೆ ಯುಎಚ್‌ಐಡಿ ಅಂಟಿಸಲಾಗಿದ್ದು, ಶೇ10ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಕಳೆದ ಅ.4 ರಿಂದ ಅ.7ರ ಅವಧಿಯಲ್ಲಿ ದಿನಕ್ಕೆ 1,75 ಲಕ್ಷದಿಂದ 2 ಲಕ್ಷ ಮನೆಗಳ ಸಮೀಕ್ಷೆ ನಡೆಯುತ್ತಿದೆ. ಕೆಎಎಸ್ ಅಧಿಕಾರಿಗಳು ಸೇರಿದಂತೆ 21 ಸಾವಿರ ಜನ ಗಣತಿದಾರರನ್ನ ನೇಮಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.