ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಸೂಕ್ತ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಲೇ ಇದ್ದು, ಈ ನಡುವಲ್ಲೇ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಸರ್ಕಾರಿ ಸ್ವಾಮ್ಯದ ಒಟಿಟಿ ಪ್ರಾರಂಭಿಸಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತ ಆದರೆ, ಹೊಸ ವರ್ಷಕ್ಕೆ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಚಿಸಿದ 10 ಸದಸ್ಯರ ಸಮಿತಿಯು. ಕೇರಳ ಸರ್ಕಾರದ OTT ‘C-ಸ್ಪೇಸ್’ ಮತ್ತು ಪ್ರಸಾರ ಭಾರತಿಯ ‘ವೇವ್ಸ್’ ಅನ್ನು ಅಧ್ಯಯನ ಮಾಡುತ್ತಿದೆ.
ಸಮಿತಿಯ ಸದಸ್ಯರಾದ ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮಹಬೂಬ್ ಪಾಷಾ ಅವರು ಮಾತನಾಡಿ ಈ ತಿಂಗಳ ಅಂತ್ಯದ ವೇಳೆಗೆ ಆಯುಕ್ತರು, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಭೆ ನಡೆಸುತ್ತೇವೆ, ಅಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲಾಗುವುದು. ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಪ್ರಸ್ತಾವನೆಯ ಪರವಾಗಿದ್ದಾರೆಂದು ಹೇಳಿದ್ದಾರೆ.
ಖಾಸಗಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಚಲನಚಿತ್ರಗಳನ್ನು ಪ್ರೋತ್ಸಾಹಿಸುವುದಿಲ್ಲ. ಚಿತ್ರಮಂದಿರಗಳ ಕೊರತೆಯಿಂದಾಗಿ ಸುಮಾರು 4,000 ಚಲನಚಿತ್ರಗಳು ಬಿಡುಗಡೆಯಾಗಿಲ್ಲ. ಖಾಸಗಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅವುಗಳನ್ನು ಸ್ವೀಕರಿಸಲು ಸಿದ್ಧರಿಲ್ಲ, ಪ್ರಸ್ತಾವಿತ ಸರ್ಕಾರಿ ಒಟಿಟಿ ಪ್ಲಾಟ್‌ಫಾರ್ಮ್ ಕನ್ನಡ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಮಾತ್ರವಲ್ಲದೆ, ಕಲೆ ಮತ್ತು ಸಂಸ್ಕೃತಿಯ ಕುರಿತಾದ ಸಾಕ್ಷ್ಯಚಿತ್ರಗಳು ಮತ್ತು ಕೃತಿಗಳನ್ನು ಪ್ರದರ್ಶಿಸಲು ಕೂಡ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಟಿಕೆಟ್ ಮಾದರಿಯಲ್ಲಿ (ಪೇ-ಪರ್-ವ್ಯೂ ಮಾದರಿ) ಚಲನಚಿತ್ರಗಳನ್ನು ನೀಡುವ ಕೇರಳದ ಪ್ಲಾಟ್‌ಫಾರ್ಮ್‌ಗಿಂತ ನಮ್ಮ ಒಟಿಟಿ ಭಿನ್ನವಾಗಿರಲಿದೆ. ಇಲ್ಲಿ ಬಳಕೆದಾರರಿಗೆ ಒಮ್ಮೆ ಶುಲ್ಕ ವಿಧಿಸಲಾಗುತ್ತದೆ. ನಾವು ಚಂದಾದಾರಿಕೆ ಮಾದರಿ ಮತ್ತು ಟಿಕೆಟ್ ಮಾದರಿಯನ್ನು (ಹೊಸ ಬಿಡುಗಡೆಗಳಿಗೆ) ಎರಡೂ ಆಯ್ಕೆಗಳನ್ನು ನೀಡುತ್ತೇವೆ.
ಬಿಡುಗಡೆಯಾಗಲಿರುವ ಚಲನಚಿತ್ರವನ್ನು ವೀಕ್ಷಿಸಲು ವಿಷಯ ಪರಿಶೀಲನಾ ಸಮಿತಿ ಇರುತ್ತದೆ. ಚಲನಚಿತ್ರವನ್ನು ಬಿಡುಗಡೆ ಮಾಡುವ ಮೊದಲು ನಿರ್ಮಾಪಕರೊಂದಿಗೆ ಆದಾಯ ಹಂಚಿಕೆಯ ಕುರಿತು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.
ಒಟಿಟಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಐದು ವರ್ಷಗಳ ಕಾಲ ಅದರ ನಿರ್ವಹಣೆಗೆ ಸುಮಾರು 8 ಕೋಟಿ ರೂ. ಅಗತ್ಯವಿದೆ. ವೇದಿಕೆ ಉಳಿಸಿಕೊಳ್ಳಲು ಸರ್ಕಾರ 50 ಕೋಟಿ ರೂ.ಗಳನ್ನು ಮೂಲ ಹಣವಾಗಿ ಬಿಡುಗಡೆ ಮಾಡಬೇಕು. ಒಟಿಟಿ ಪ್ರಾರಂಭವಾದ ಕೂಡಲೇ ಆದಾಯ ನಿರೀಕ್ಷಿಸಲಾಗುವುದಿಲ್ಲ. ಎರಡು ವರ್ಷಗಳ ನಂತರ ಚಂದಾದಾರಿಕೆಗಳು ಮತ್ತು ಆದಾಯವು ಸುಧಾರಿಸಸಲಿದೆ. 5ನೇ ವರ್ಷಕ್ಕೆ ಲಾಭ ಸಾಧಿಸಿ ಸ್ವಾವಲಂಬಿಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಈಗ 50 ಕೋಟಿ ರೂ.ಗಳ ಹೂಡಿಕೆ ಮಾಡಿದರೆ, ವಿಷ್ಯದಲ್ಲಿ ಪ್ರತಿ ವರ್ಷ ಕೋಟಿ ಗಳಿಸಬಹುದುಯ ಕನ್ನಡದ ಜೊತೆಗೆ, ಪ್ರಸ್ತಾವಿತ OTT ವೇದಿಕೆಯು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಂತಹ ಇತರ ಭಾಷೆಗಳ ಚಲನಚಿತ್ರಗಳನ್ನು ಪ್ರಚಾರ ಮಾಡುತ್ತದೆ. ಈ ವೇದಿಕೆಯಿಂದ 25 ಲಕ್ಷ ಚಂದಾದಾರರನ್ನು ನಿರೀಕ್ಷಿಸಬಹುದು ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.