ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಆಸ್ತಿಗಳನ್ನು ಜಪ್ತಿ ಮತ್ತು ಮುಟ್ಟುಗೋಲು ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ, ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿವಿ ಕೃಷ್ಣ ರಾವ್ ಅವರನ್ನು ರಿಕವರಿ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಆದಾಯ ಕಾಯ್ದೆ, 2025ಕ್ಕೆ ಸಂಬಂಧಿಸಿದಂತೆ ಆಸ್ತಿಯನ್ನು ಜಪ್ತಿ ಮತ್ತು ವಶಪಡಿಸಿಕೊಳ್ಳಲು ಕರ್ನಾಟಕ ವಸೂಲಾತಿ ಆಯುಕ್ತರ ನೇಮಕಾತಿ ನಿಯಮಗಳ ಅಡಿಯಲ್ಲಿ ನೇಮಿಸಲಾಗಿದೆ ಎಂದು ಅದು ಹೇಳಿದೆ.
ಸೆಪ್ಟೆಂಬರ್ 9 ರಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಕಾನೂನುಬಾಹಿರ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮ, 2025ಕ್ಕೆ ಸಹಿ ಹಾಕಿದ್ದಾರೆ.
ಈ ಕಾಯ್ದೆಯು ರಾಜ್ಯದಾದ್ಯಂತ ಜಪ್ತಿ ಮತ್ತು ಮುಟ್ಟುಗೋಲು ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆಯಿಲ್ಲದ ಹಿರಿಯ ಅಧಿಕಾರಿಯನ್ನು ವಸೂಲಾತಿ ಆಯುಕ್ತರಾಗಿ ನೇಮಕ ಮಾಡುವುದಕ್ಕೆ ಅವಕಾಶ ನೀಡುತ್ತದೆ.
ಕಾಯ್ದೆಯಡಿಯಲ್ಲಿ, ವಸೂಲಾತಿ ಆಯುಕ್ತರು ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳುವ, ಅಧೀನ ಅಧಿಕಾರಿಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಸಿವಿಲ್ ನ್ಯಾಯಾಲಯಕ್ಕೆ ಸಮಾನವಾದ ಅಧಿಕಾರವನ್ನು ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
ಇತ್ತೀಚೆಗೆ ಹೊರಡಿಸಲಾದ ಸಂಬಂಧಿತ ಆದೇಶದಲ್ಲಿ, ಸರ್ಕಾರವು ಕೃಷ್ಣ ರಾವ್ ಅವರ ವೇತನ ಮತ್ತು ಸೇವಾ ನಿಯಮಗಳನ್ನು ನಿಗದಿಪಡಿಸಿದೆ.
ಅವರು ಮಾಸಿಕ 2,95,256 ರೂ. ವೇತನವನ್ನು ಪಡೆಯಲಿದ್ದು, ಇದರಲ್ಲಿ 1,04,006 ರೂ. ಮೂಲ ವೇತನ, ಜೊತೆಗೆ ಅವರ ಕೊನೆಯ ವೇತನವಾದ 2,25,000 ರೂ.ಗಳ ಮೇಲೆ ಲೆಕ್ಕಹಾಕಿದ ತುಟ್ಟಿಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆಗಳು ಸೇರಿವೆ.