ಬೆಂಗಳೂರು: 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 25 ವರ್ಷದ ಖಾಸಗಿ ಕಂಪನಿ ಉದ್ಯೋಗಿಯೋರ್ವನನ್ನು ಕುಂಬಳಗೋಡು ಪೊಲೀಸರು ಶನಿವಾರ ಬಂಧನಕ್ಕೊಪಡಿಸಿದ್ದಾರೆ.
ಆರೋಪಿಯನ್ನು ಬಾಲಕಿಯ ನೆರೆಮನೆಯ ಆರ್ಯನ್ ಕುಮಾರ್ ಎಂದು ಗುರುತಿಸಲಾಗಿದೆ. ಕೆಟ್ಟ ಸ್ಪರ್ಶದ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಪೋಷಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯ ಹಾಗೂ ಬಾಲಕಿಯ ಹೇಳಿಕೆ ಆಧರಿಸಿ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮತ್ತೊಂದು ಘಟನೆಯಲ್ಲಿ, 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸರು ಹೋಟೆಲ್ ಉದ್ಯೋಗಿಯೊಬ್ಬನನ್ನು ಬಂಧಿಸಿದ್ದಾರೆ.
ಅಕ್ಟೋಬರ್ 5 ರಂದು ಘಟನೆ ನಡೆದಿದ್ದು, ಆರೋಪಿ ಗಿರೀಶ್ ಬಾಲಕಿಗೆ ಚಾಕೊಲೇಟ್ ನೀಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತನ್ನ ತಾಯಿಗೆ ವಿಷಯ ತಿಳಿಸಿದ್ದು, ನಂತರ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.