ಬೆಂಗಳೂರು: ಹೆಬ್ಬಾಳ ಕೆರೆಯ ಕಾಲುವೆಯ ಮಾರ್ಗ ಬದಲಾಯಿಸುವ ಯೋಜನೆಯನ್ನು ಸರ್ಕಾರವೇ ನೇಮಿಸಿರುವ ತಜ್ಞರ ಸಮಿತಿ ಅವಾಸ್ತವಿಕ ಎಂದು ಕಳವಳ ವ್ಯಕ್ತಪಡಿಸಿದೆ.
ಏಪ್ರಿಲ್ 2025 ರಲ್ಲಿ, ಕರ್ನಾಟಕ ಸರ್ಕಾರ ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ಮಾರ್ಗದ ಡಿಪಿಆರ್ ಅನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಿತ್ತು.
ಡಿಪಿಆರ್‌ನಲ್ಲಿ ಲೋಪ ಕಂಡಬಂದ ಸಂದರ್ಭದಲ್ಲಿ, ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ (ಬಿಎಂಆರ್‌ಸಿಎಲ್) ಕಾರ್ಯಕಾರಿ ನಿರ್ದೇಶಕ (ಸಿವಿಲ್) ಎಸ್. ಹೆಗ್ಗರೆಡ್ಡಿ ನೇತೃತ್ವದಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿತ್ತು.
ಸುರಂಗ ರಸ್ತೆ ತಜ್ಞ ವಿನೋದ್ ಶುಲ್ಕ, ರಸ್ತೆ ಸುರಕ್ಷತೆ ತಜ್ಞ ಬಿ. ಅಶ್ವತ್ಥ್ ಕುಮಾರ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಮಾಧವ ಅವರು ಸಮಿತಿ ಸದಸ್ಯರಾಗಿದ್ದಾರೆ.
ತಜ್ಞರ ಸಮಿತಿ 89 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಡಿಪಿಆರ್‌ನಲ್ಲಿ 121 ನ್ಯೂನತೆಗಳನ್ನು 50 ಪುಟಗಳಲ್ಲಿ ವಿವರಿಸಿದೆ.
ಪ್ರಮುಖವಾಗಿ, ಯೋಜನೆಯ ಪ್ರದೇಶ, ಅಲೈನ್‌ಮೆಂಟ್, ಭೂಲಭ್ಯತೆ, ಸಂಚಾರ, ಪ್ರವೇಶ–ನಿರ್ಗಮನ ಸ್ಥಳಗಳಲ್ಲಿ ಹಲವು ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಪರಿಸರ ಕಾರ್ಯಕರ್ತ ದತ್ತಾತ್ರೇಯ ಟಿ ದೇವರೆ ಅವರು ಸಲ್ಲಿಸಿದ ಆರ್‌ಟಿಐ ಮೂಲಕ ಪಡೆದ ಮತ್ತು ಅಕ್ಟೋಬರ್ 12 ರಂದು ಸಾರ್ವಜನಿಕಗೊಳಿಸಿದ ಈ ವರದಿಯು, ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬೆಂಬಲ ಇರುವ ಈ ಯೋಜನೆಯಲ್ಲಿ ಭಾರೀ ಲೋಪಗಳಾಗಲಿದೆ ಎಂದು ತಿಳಿಸಿದೆ.
ಸುರಂಗ ರಸ್ತೆ ಯೋಜನೆಯನ್ನು ರೂಪಿಸಿರುವವರು, ತಜ್ಞರ ಸಮಿತಿಯ ಕಳವಳವನ್ನು ದೂರ ಮಾಡಿದ್ದೇವೆ ಎಂದು ಹೇಳಿದ್ದರೂ, ಎಲ್ಲ ನ್ಯೂನತೆಗೂ ಸರಿಯಾದ ವಿವರಣೆ ಸಿಕ್ಕಿಲ್ಲ. ಪ್ರಮುಖವಾಗಿ, ಲಾಲ್‌ಬಾಗ್ ಬಳಿ ಸುರಂಗ ರಸ್ತೆಯ ಪ್ರವೇಶ–ನಿರ್ಗಮನ ಸೌಲಭ್ಯವನ್ನು ಕಲ್ಪಿಸುವ ಪ್ರಸ್ತಾವದಲ್ಲಿ ಸಮಗ್ರ ಭೂತಾಂತ್ರಿಕ ಅಧ್ಯಯನಗಳಾಗಿಲ್ಲ.
ಯೋಜನೆ ಅನುಷ್ಠಾನವಾಗುವ ಶೇ 90ರಷ್ಟು ಪ್ರದೇಶದಲ್ಲಿ ಎಲ್ಲ ರೀತಿಯ ಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿರಬೇಕು. ಇದರಿಂದ ಸಮಯ ಹಾಗೂ ವೆಚ್ಚ ಹೆಚ್ಚಾಗುವುದನ್ನು ತಪ್ಪಿಸಬಹುದು. ಆದರೆ, ಇದನ್ನು ಯೋಜನೆ ರೂಪಿಸಿದವರು ಈವರೆಗೂ ಪಾಲಿಸಿಲ್ಲ.
ತಜ್ಞರ ಸಮಿತಿ ಕಂಡುಹಿಡಿದ ನ್ಯೂನತೆಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಬಿ–ಸ್ಮೈಲ್ ಪರಿಹಾರಗಳನ್ನು ನೀಡಿದೆಯಾದರೂ, ಭೂವೈಜ್ಞಾನಿಕ ಮತ್ತು ಭೂತಾಂತ್ರಿಕ ತಪಾಸಣೆಗಳನ್ನು ಡಿಪಿಆರ್ ತಯಾಸಿರುವ ಸಮಯದಲ್ಲಿ ನಡೆಸಿಲ್ಲ. ಇದು ಸಾಮಾನ್ಯ ಪ್ರಕ್ರಿಯೆಗೆ ವಿರುದ್ಧವಾಗಿದೆ.
ಬೆಂಗಳೂರಿನಲ್ಲಿ ಮೆಟ್ರೊ ಸುರಂಗದ ಅನುಭವದ ಮೇಲೆ ಸುರಂಗ ರಸ್ತೆ ಯೋಜನೆ ಅನುಷ್ಠಾನದಲ್ಲಿ ಸಮಯ ಹೆಚ್ಚಾಗಲಿದೆ. ಸುರಂಗ ರಸ್ತೆ ಯೋಜನೆಯ ವೆಚ್ಚವೂ ಶೇ 10ರಿಂದ ಶೇ 15ರಷ್ಟು ಹೆಚ್ಚಾಗಲಿದೆ ಎಂದು ಸಮಿತಿ ತಿಳಿಸಿದೆ.
ಮೆಟ್ರೊ ಮಾರ್ಗಕ್ಕೆ ಪರ್ಯಾಯವಾಗಿರುವ ಸುರಂಗ ರಸ್ತೆಯ ಸಂಚಾರ ದಟ್ಟಣೆ ವೇಳೆ ಹೇಗಿರುತ್ತದೆ ಎಂಬ ದತ್ತಾಂಶ ಇಲ್ಲ. ಪ್ರವೇಶ ಮತ್ತು ನಿರ್ಗಮನ ರ‍್ಯಾಂಪ್‌ಗಳ ಸ್ಥಳವನ್ನು ಇನ್ನಷ್ಟು ವಿಸ್ತರಿಸದಿದ್ದರೆ ವಾಹನ ದಟ್ಟಣೆ ಉಂಟಾಗುತ್ತದೆ. ಹೆಬ್ಬಾಳ ಕೆರೆಯ ಕಾಲುವೆಯ ಮಾರ್ಗ ಬದಲಾಯಿಸುವುದರಿಂದ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅಡಚಣೆ ಉಂಟಾಗುತ್ತದೆ. ಅಂತರ್ಜಲ ಸೇರಿದಂತೆ ಪರಿಸರದ ಮೇಲಾಗುವ ಪರಿಣಾಮದ ಮಾಹಿತಿ ಲಭ್ಯವಿಲ್ಲ. ಭೂಸ್ವಾಧೀನ, ಸೌಲಭ್ಯ ವರ್ಗಾವಣೆ, ಉಪಕರಣ, ಶುಲ್ಕ ಸಂಗ್ರಹ ವ್ಯವಸ್ಥೆ ಇತ್ಯಾದಿಗೆ ಒಟ್ಟಾರೆ ತಗಲುವ ವೆಚ್ಚವನ್ನು ಅಂದಾಜಿಸಿ, ಒದಗಿಸುವುದು ಸಾಮಾನ್ಯ ಪ್ರಕ್ರಿಯೆಗೆ ವಿರುದ್ಧವಾಗಿದೆ. ಸುರಂಗ ರಸ್ತೆಯಲ್ಲಿ ಮುಂದಿನ 25 ವರ್ಷಗಳಲ್ಲಿನ ಸಂಚಾರದ ದೂರದೃಷ್ಟಿ ಇಟ್ಟುಕೊಂಡು ಪಥಗಳ ಸಂಖ್ಯೆಯನ್ನು ನಿರ್ಧರಿಸಬೇಕು. ಸಂಚಾರ ದತ್ತಾಂಶದ ಪ್ರಕಾರ, 2041ರ ವೇಳೆಗೆ 2+2 ಪಥಗಳ ಅಗತ್ಯವಿರುತ್ತದೆ ಎಂದು ಸಮಿತಿಯೂ ನ್ಯೂನತೆಗಳನ್ನು ಗುರ್ತಿಸಿದೆ.
ಪರಿಸರವಾದಿ ಎ.ಎನ್. ಯಲ್ಲಪ್ಪ ರೆಡ್ಡಿ ಅವರು ಮಾತನಾಡಿ, ನೈಸರ್ಗಿಕ ಚರಂಡಿಗಳನ್ನು ಬೇರೆಡೆಗೆ ತಿರುಗಿಸುವುದರಿಂದ ಪರಿಸರ ಮತ್ತು ಭೌಗೋಳಿಕ ಪರಿಣಾಮಗಳು ಉಂಟು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಕೃತಿಯ ಬದಲಾವಣೆಗಳನ್ನು ಮಾಡಿದಾಗ ಭೂಮಿಯ ಮೇಲ್ಮೈ ಬದಲಾಗುತ್ತದೆ. ಈ ಹಂತದಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡುವುದರಿಂದ ಅಂತರ್ಜಲ ಕಲುಷಿತಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಅಂತರ್ಜಲ ಕಲುಷಿತಗೊಂಡರೆ, ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಪುನರ್ ನಿರ್ಮಿಸಲು ವರ್ಷಗಳೇ ಬೇಕಾಗುತ್ತದೆ. ಹೀಗಾಗಿ ಯಾವುದೇ ಬದಲಾವಣೆ ಮಾಡುವುದು ಮಣ್ಣಿನ ಸರಂಧ್ರತೆ, ವಿನ್ಯಾಸ ಮತ್ತು ರಚನೆ ಕುರಿತು ಅಧ್ಯಯನ ಮಾಡಬೇಕು ಎಂದು ಹೇಳಿದ್ದಾರೆ.
ನೈಸರ್ಗಿಕ ಚರಂಡಿಗಳ ಬದಲಾವಣೆ ಕರ್ನಾಟಕ ನಗದರ ಮತ್ತು ದೇಶ ಯೋಜನಾ ಕಾಯ್ದೆ, ಪುರಸಭೆಯ ಉಪ-ಕಾನೂನುಗಳು, ರಾಜಕಾಲುವೆಗಳನ್ನು (SWDs) ರಕ್ಷಿಸುವ NGT/HC ಆದೇಶಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಬೆಂಗಳೂರು ಟೌನ್‌ಹಾಲ್‌ನ ಸಂಚಾಲಕ ಸಂದೀಪ್ ಅನಿರುಧನ್ ಹೇಳಿದ್ದಾರೆ.
ಸರ್ಕಾರದ ಈ ಕ್ರಮವು ಕಾನೂನುಗಳನ್ನು ಉಲ್ಲಂಘಿಸುವುದರ ಜೊತೆಗೆ, ಹಿಮ್ಮುಖ ಹರಿವು ಮತ್ತು ಪ್ರವಾಹ, ಮಣ್ಣಿನ ಸವೆತ, ಮಾಲಿನ್ಯ ಮತ್ತು ಕೆರೆಗಳ ಮಾಲಿನ್ಯ, ಸಸ್ಯ ಮತ್ತು ಪ್ರಾಣಿಗಳ ಆವಾಸಸ್ಥಾನದ ನಷ್ಟ, ಜಲಚರಗಳ ನಷ್ಟ ಮುಂತಾದ ವಿವಿಧ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.