ಡಿ.ಕೆ. ಶಿವಕುಮಾರ್ 
ರಾಜ್ಯ

'IT-BT ಕಂಪನಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಆಲಿಸುತ್ತೇವೆ; ರಸ್ತೆ ಅಭಿವೃದ್ಧಿ ಮಾಡುವುದಾದರೆ ಕಿರಣ್ ಮುಜುಂದಾರ್ ಗೆ ಅಗತ್ಯ ಸಹಕಾರ'

ನೂತನ ಐದು ಪಾಲಿಕೆಗಳು ಬೆಂಗಳೂರಿನ ಅಭಿವೃದ್ಧಿಯಲ್ಲಿ ಇತಿಹಾಸ ಸೃಷ್ಟಿಸಲಿವೆ. ಬೆಂಗಳೂರು ನಗರದಿಂದ 6 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರ ಪೂರ್ವ ಪಾಲಿಕೆ 1600 ಕೋಟಿ ರೂಪಾಯಿ ಪಾಲು ಹೊಂದಿದೆ

ಬೆಂಗಳೂರು: ಮುಂದಿನ ದಿನಗಳಲ್ಲಿ ಐಟಿ‌- ಬಿಟಿ ಕಂಪನಿಗಳ ಜೊತೆ ನಾನು ಹಾಗೂ ಐಟಿ, ಕೈಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರುಗಳು ಪ್ರತ್ಯೇಕವಾಗಿ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಕೆ ಆರ್ ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ "ಬೆಂಗಳೂರು ನಡಿಗೆ" ಅಭಿಯಾನದ ಅಂಗವಾಗಿ "ನಾಗರಿಕರೊಂದಿಗೆ ಸಂವಾದ" ನಡೆಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ನೂತನ ಐದು ಪಾಲಿಕೆಗಳು ಬೆಂಗಳೂರಿನ ಅಭಿವೃದ್ಧಿಯಲ್ಲಿ ಇತಿಹಾಸ ಸೃಷ್ಟಿಸಲಿವೆ. ಬೆಂಗಳೂರು ನಗರದಿಂದ 6 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರ ಪೂರ್ವ ಪಾಲಿಕೆ 1600 ಕೋಟಿ ರೂಪಾಯಿ ಪಾಲು ಹೊಂದಿದೆ. ಈ ಮೊದಲು ಎಲ್ಲಾ ಭಾಗಗಳ ತೆರಿಗೆ ಹಂಚಿಕೆಯಾಗುತ್ತಾ ಇತ್ತು. ಈಗ ಆಯಾ ಪ್ರದೇಶಗಳ ತೆರಿಗೆ ಅಲ್ಲಿಯೇ ವಿನಿಯೋಗವಾಗಲಿದೆ ಎಂದು ತಿಳಿಸಿದರು.

ಬಹಳ ಸಂತೋಷ ಅವರೇ ಯಾವ ರಸ್ತೆ ಅಭಿವೃದ್ಧಿ ಮಾಡುತ್ತಾರೆ ಎಂದು ಆಯ್ಕೆ ಮಾಡಿಕೊಳ್ಳಲಿ. ಈ ಬಗ್ಗೆ ನಮ್ಮ ಜೊತೆ ಅವರು ಚರ್ಚೆ ಮಾಡಿಲ್ಲ. ಅವರು ನಮ್ಮ ಜೊತೆ ಚರ್ಚೆ ಮಾಡಲಿ, ಅವರಿಗೆ ಅಗತ್ಯ ಸಹಕಾರ ನೀಡುತ್ತೇವೆ.
ಡಿ.ಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

ಕೆ.ಆರ್.ಪುರ ಹಾಗೂ ಮಹದೇವಪುರ ಒಳಗೊಂಡಿರುವ ಬೆಂಗಳೂರು ಪೂರ್ವ ಪಾಲಿಕೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಶ್ರೀಮಂತ ಪಾಲಿಕೆ. ಈ ಭಾಗದಲ್ಲಿ ಅನೇಕ ಐಟಿ ಬಿಟಿ ಕಂಪನಿಗಳಿದ್ದು, ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ 74ನೇ ತಿದ್ದುಪಡಿ ಅಡಿಯಲ್ಲಿ ಪಾಲಿಕೆ ರಚಿಸಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಪಾರ ಹಣ ವಿನಿಯೋಗ ಮಾಡಬಹುದು.

ಈ ಹಿಂದೆ ಒಂದೇ ಪಾಲಿಕೆ ಇದ್ದಾಗ ಈ ಭಾಗದಿಂದ ಬರುವ ತೆರಿಗೆ ಆದಾಯವನ್ನು ಬೆಂಗಳೂರಿನ ಇತರೆ ಭಾಗಗಳ ಅಭಿವೃದ್ಧಿಗೆ ಬಳಕೆಯಾಗುತ್ತಿತ್ತು. ಈಗ ಹೊಸ ಕಾಯ್ದೆ ಮೂಲಕ ಈ ಭಾಗದಲ್ಲಿ ಕ್ರೂಢೀಕರಣವಾಗುವ ಅಷ್ಟೂ ಸಂಪನ್ಮೂಲವನ್ನು ಈ ಪಾಲಿಕೆಯ 50 ವಾರ್ಡ್ ಗಳ ಅಭಿವೃದ್ಧಿಗೆ ನೀಡಲಾಗುವುದು. ಇದರಿಂದ ಈ ಭಾಗದ ಐಟಿ ವಲಯ ಹಾಗೂ ನಾಗರೀಕರಿಗೆ ಉತ್ತಮ ಸೌಲಭ್ಯ ಕಲ್ಪಿಸಬಹುದಾಗಿದೆ” ಎಂದು ಭರವಸೆ ನೀಡಿದರು.

ಜನರ ಸಮಸ್ಯೆಗಳ‌ ಶೀಘ್ರ ‌ನಿವಾರಣೆಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ.‌ ಟೆಂಡರ್‌‌ ಇಲ್ಲದೇ ಪಾಲಿಕೆಯ ಕೌನ್ಸಿಲ್ 10 ಕೋಟಿ ಮೊತ್ತದ ಕಾಮಗಾರಿಗಳಿಗೆ ಹಾಗೂ ಪಾಲಿಕೆ ಆಯುಕ್ತರು 3 ಕೋಟಿ ರೂಪಾಯಿ ಖರ್ಚು ಮಾಡಲು ಅವಕಾಶ ನೀಡಲಾಗಿದೆ.

ಬಿಬಿಎಂಪಿ ಇದ್ದಾಗ 10 ಕೋಟಿ ಖರ್ಚು ಮಾಡಬಹುದಾಗಿತ್ತು. ಈಗ ಆ ಹಣ 50 ಕೋಟಿಗೆ ಏರಿಕೆಯಾಗಿದೆ. ‌ಬೆಂಗಳೂರಿನ ಅಭಿವೃದ್ಧಿಗೆ ಐದು ಪಟ್ಟು ಹೆಚ್ಚು ಅವಕಾಶ ದೊರೆತಿದೆ” ಎಂದು ವಿವರಿಸಿದರು.

“ಬೆಂಗಳೂರಿನ ಜನತೆಗೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ನೀಡಿದೆ. ಕಂದಾಯ ಭೂಮಿಯಲ್ಲಿ ಕಟ್ಟಿರುವ ಮನೆಗಳಿಗೆ 'ಬಿ' ಖಾತೆ ಹೊಂದಿರುವ ಹಾಗೂ ಹೊಂದಿರದವರು 500 ರೂಪಾಯಿ ಶುಲ್ಕ ಹಾಗೂ ಆಸ್ತಿ ಮೌಲ್ಯದ ಶೇ.5 ರಷ್ಟು ‌ಹಣ ಪಾವತಿ ಮಾಡಿದರೆ 'ಎ‌‌' ಖಾತೆ ನೀಡಲಾಗುವುದು” ಎಂದರು.

ಬಿ ಖಾತಾ ಇದ್ದವರಿಗೆ ಹಾಗೂ ಇಲ್ಲದವರಿಗೂ ಎ ಖಾತಾ ವಿತರಣೆ

“ಕೆ.ಆರ್‌‌ ಪುರಂ ಭಾಗದಲ್ಲಿ ರಸ್ತೆ ಒತ್ತುವರಿ ಪ್ರಕರಣಗಳು ಹೆಚ್ಚಿವೆ. ಒಬ್ಬೊಬ್ಬರು ಐದಾರು ನಿವೇಶಗಳಲ್ಲಿ ಅಕ್ರಮ ನಿರ್ಮಾಣಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಕಟ್ಟುವ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೆಲಸಮ‌ ಮಾಡಲಾಗುವುದು. 30×40 ಅಳತೆಯ ಕಟ್ಟಡಗಳಿಗೆ ಓಸಿ ಸಿಸಿ ವಿನಾಯಿತಿ ನೀಡಲಾಗಿದೆ.

ಇದು ತಾತ್ಕಾಲಿಕ ವಿನಾಯಿತಿ. ಹೀಗಾಗಿ ಮುಂದೆ ಎಲ್ಲರೂ ಕಟ್ಟಡ ನಕ್ಷೆ ಅನುಮೋದನೆ ಪಡೆದುಕೊಳ್ಳಿ. ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಹಡಿಗಳನ್ನು ನಿರ್ಮಾಣ‌ ಮಾಡುವುದು, ಸೆಟ್ ಬ್ಯಾಕ್ ಬಿಡದೆ ಒತ್ತೊತ್ತಾಗಿ ಮನೆ ಕಟ್ಟುವುದಕ್ಕೆ ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದರು.

ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನೀಡಲಾಗಿದ್ದು, ಮೇಲ್ಸೇತುವೆ, ಮೆಟ್ರೋ ಸೌಕರ್ಯ ಕಲ್ಪಿಸಲಾಗಿದ್ದು, ಟನಲ್ ರಸ್ತೆಯನ್ನು ಈ ಭಾಗಕ್ಕೆ ಕಲ್ಪಿಸಲಾಗುವುದು. ಈ ಭಾಗದ ಜನರೊಂದಿಗೆ ಹೆಜ್ಜೆ ಹಾಕಿ, ನೂರಾರು ನಿವಾಸಿಗಳ ಜೊತೆ ಚರ್ಚೆ ಮಾಡಿದ್ದೇನೆ. ನಾನು ನೂರಕ್ಕೆ ನೂರರಷ್ಟು ಸರಿಯಲ್ಲದಿರಬಹುದು. ಆದರೆ, ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಈ ಭಾಗದ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಹಿರಿಯ ನಾಯಕರು, ಮಾಜಿ ಕಾರ್ಪೊರೇಟರ್ ಗಳು, ನಿವಾಸಿ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರ ಸಲಹೆಗಳನ್ನು ಸರ್ಕಾರ ಹಾಗೂ ಜಿಬಿಎ ಪರಿಹಾರ ನೀಡಲು ಬದ್ಧವಾಗಿದೆ” ಎಂದು ತಿಳಿಸಿದರು.

ಬೆಂಗಳೂರಿನ 10-15 ರಸ್ತೆಗಳ ಅಭಿವೃದ್ಧಿ ಮಾಡಲು ಸಿದ್ಧ ಎಂದಿರುವ ಕಿರಣ್ ಮಜುಂದಾರ್ ಷಾ ಅವರ ಹೇಳಿಕೆ ನೀಡಿದ್ದು ಈ ಬಗ್ಗೆ ನಿಮ್ಮ ಬಗ್ಗೆ ಚರ್ಚೆ ಮಾಡಿದ್ದಾರಾ ಎಂದು ಕೇಳಿದಾಗ, “ಬಹಳ ಸಂತೋಷ ಅವರೇ ಯಾವ ರಸ್ತೆ ಅಭಿವೃದ್ಧಿ ಮಾಡುತ್ತಾರೆ ಎಂದು ಆಯ್ಕೆ ಮಾಡಿಕೊಳ್ಳಲಿ. ಈ ಬಗ್ಗೆ ನಮ್ಮ ಜೊತೆ ಅವರು ಚರ್ಚೆ ಮಾಡಿಲ್ಲ. ಅವರು ನಮ್ಮ ಜೊತೆ ಚರ್ಚೆ ಮಾಡಲಿ, ಅವರಿಗೆ ಅಗತ್ಯ ಸಹಕಾರ ನೀಡುತ್ತೇವೆ” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸರ್ಕಾರಿ ಜಾಗದಲ್ಲಿ ಸಂಘಗಳ ಚಟುವಟಿಕೆಗೆ ಇಂದಿನಿಂದಲೇ ಅನುಮತಿ ಕಡ್ಡಾಯ: ರಾಜ್ಯ ಸರ್ಕಾರ ಅಧಿಕೃತ ಆದೇಶ

'ಒಂದು ಸಣ್ಣ ಪ್ರಚೋದನೆ ಭಾರತದ ಭೂಪಟವೇ ಬದಲಾಗಬಹುದು': ಮತ್ತೆ ಪರಮಾಣು ಧಮ್ಕಿ ಹಾಕಿದ ಪಾಕ್ ಸೇನಾ ಮುಖ್ಯಸ್ಥ

ಢಾಕಾದಲ್ಲಿ ಭಾರತೀಯ ಸೇನಾ ಗುಪ್ತಚರ ಅಧಿಕಾರಿಗಳು: ಹಳೆಯ ಸೇನಾ ವಿಮಾನ ನಿಲ್ದಾಣಕ್ಕೆ ಬಾಂಗ್ಲಾ ಸೇನಾ ಮುಖ್ಯಸ್ಥ ಭೇಟಿ; ಸಭೆ!

ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ ವೇತನ ಕಟ್; ಶೇ.10-15 ರಷ್ಟು ತಂದೆ-ತಾಯಿ ಖಾತೆಗೆ!

ಅಮೆರಿಕ-ಭಾರತ ವ್ಯಾಪಾರ ಮಾತುಕತೆ: 'ಪ್ರಗತಿ ಕಂಡುಬಂದಿದೆ, ಯಾವುದೇ ಪ್ರಮುಖ ವ್ಯತ್ಯಾಸಗಳಿಲ್ಲ'; ವಾಣಿಜ್ಯ ಸಚಿವಾಲಯ

SCROLL FOR NEXT