ದೊಡ್ಡಬಳ್ಳಾಪುರ: ಪತಿ ಮನೆಯವರ ಕಿರುಕುಳದಿಂದ ಬೇಸತ್ತ ಉಪನ್ಯಾಸಕಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ಥ ಮಹಿಳೆಯನ್ನು ಪುಷ್ಪಾವತಿ (30) ಎಂದು ಗುರುತಿಸಲಾಗಿದೆ.
11 ತಿಂಗಳ ಹಿಂದೆ ತಪಸ್ಸಿಹಳ್ಳಿಯ ವೇಣು ಎಂಬವರ ಜತೆ ಪುಷ್ಪಾವತಿ ವಿವಾಹವಾಗಿತ್ತು. ಮದುವೆ ನಂತರ ಪತಿ ಮನೆಯಲ್ಲಿ ಪುಷ್ಪಾವತಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ವರದಕ್ಷಿಣೆ, ನಿವೇಶನ ಕೊಡಿಸುವಂತೆ ಪೀಡಿಸುತ್ತಿದ್ದರು ಎಂದು ಪುಷ್ಪಾವತಿ ಆರೋಪಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುಷ್ಪಾವತಿ ನಾಪತ್ತೆ ಆಗಿರುವ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಕುಟುಂಬಸ್ಥರು ಕೇಸ್ ದಾಖಲಿಸಿದ್ದಾರೆ.
2ನೇ ಮದುವೆಗೆ ಮುಂದಾಗಿದ್ದ ಪತಿ ಮಹಾಶಯ
ಇನ್ನು ಸಂತ್ರಸ್ತೆ ಪುಷ್ಪಾವತಿ ಪತಿ ವೇಣು 2ನೇ ಮದುವೆಗೆ ಮುಂದಾಗಿದ್ದ ಎಂದು ಹೇಳಲಾಗಿದೆ. ಈ ಬಗ್ಗೆಯೂ ವಿಡಿಯೋದಲ್ಲಿ ಮಾತನಾಡಿರುವ ಪುಷ್ಪಾವತಿ, 'ಗಂಡನಿಗೆ ಎರಡನೇ ಮದುವೆಯಾಗುವ ಆಸೆಯಿದ್ದು ಮಾನಸಿಕವಾಗಿ ಕಿರುಕುಳ ಕೊಡ್ತಿದ್ದ. ಇಷ್ಟೇ ಅಲ್ಲದೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಲು ಸಹ ಪ್ಲ್ಯಾನ್ ಮಾಡಿದ್ದ. ಹೀಗಾಗಿ 15 ದಿನ ಮನೆಯಲ್ಲಿ ಊಟ ಬಿಟ್ಟಿದ್ದೆ ಎಂದು ಪುಷ್ಪಾವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಮೈದುನನ ಜೊತೆ ಮಲಗೋಕೆ ಒತ್ತಾಯ
ಇದರ ನಡುವೆ ಮೈದುನನ ಜೊತೆ ಮಲಗುವಂತೆಯೂ ಬಲವಂತ ಮಾಡಿದ್ದಾರೆ ಎಂದು ಆರೋಪ ಮಾಡಿ ಗೃಹಿಣಿ ಪುಷ್ಪ 8 ನಿಮಿಷಗಳ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಮನೆ ಎದುರೇ ಅಂತ್ಯ ಸಂಸ್ಕಾರ ಮಾಡಿ
ವಿಡಿಯೋದಲ್ಲಿ ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ ಹಾಗೂ ಮೈದುನ ನಾರಾಯಣಸ್ವಾಮಿ ಸೇರಿದಂತೆ ಸಂಬಂಧಿಕಾರಾದ ಮುತ್ತೇಗೌಡ ಹಾಗೂ ಪಲ್ಲವಿ ಅವರ ಕಿರುಕುಳವೇ ನನ್ನ ಸಾವಿಗೆ ಕಾರಣ ಅವರಿಗೆ ತಕ್ಕ ಶಿಕ್ಷೆ ಕೊಡಿಸಿ, ನನ್ನ ಮೃತದೇಹವನ್ನ ಗಂಡನ ಮನೆಯೊಳಗೆ ಮಣ್ಣು ಮಾಡುವಂತೆ ಗೃಹಿಣಿ ವಿಡಿಯೋದಲ್ಲಿ ಆಗ್ರಹಿಸಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಗಂಡ ವೇಣು, ಮಾವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪುಷ್ಪಾವತಿ ಆರೋಪವೇನು?
ನಾನು ಮದುವೆಯಾಗಿ ಗಂಡನ ಮನೆಗೆ ಹೋದ ದಿನದಿಂದ ನನ್ನ ಗಂಡ ನನ್ನ ಜೊತೆ ಸರಿಯಾಗಿ ಸಂಸಾರ ಮಾಡದೆ, ನನ್ನಿಂದ ದೂರ ಉಳಿಯುತ್ತಿದ್ದರು. ಸಂಸಾರ ಮಾಡಬೇಕೆಂದು ಎಷ್ಟು ಪ್ರಯತ್ನ ಪಟ್ಟರು ಗಂಡ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಈ ವಿಚಾರವನ್ನು ನಮ್ಮ ಅತ್ತೆ ಮಾವನಿಗೆ ತಿಳಿಸಿದರೆ ಎಲ್ಲಾ ಸರಿ ಹೋಗುತ್ತೆ ಸುಮ್ಮನಿರು ಎಂದು ಆರಂಭದಲ್ಲಿ ಹೇಳುತ್ತಿದ್ದರು.
ಗಂಡನಿಗೆ ನಾವು ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, ಈಗ ಮಗು ಬೇಡ 1-2 ವರ್ಷ ಹೋಗಲಿ ನಂತರ ಮಗು ಮಾಡಿಕೊಳ್ಳೋಣ. ಈಗ ಯಾಕೆ ಅರ್ಜೆಂಟ್ ಎಂದು ನನಗೆ ಬೈಯುತ್ತಿದ್ದರು. ನನಗೆ ಅನುಮಾನ ಬಂದು, ನಿನಗೇನಾದರೂ ತೊಂದರೆ ಇದ್ದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದು ಗಂಡನಿಗೆ ತಿಳಿಸಿದ್ದೆ. ಆಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು.
ಅವರನ್ನು ಮುಟ್ಟಿದರೆ ಕಾಲಿನಿಂದ ನನ್ನ ಎದೆಗೆಲ್ಲ ಒದೆಯುತ್ತಿದ್ದರು. ಮಗು ಬೇಕು ಎಂದರೆ ನನ್ನ ಚಿಕ್ಕ ಮಗನ ಬಳಿ ಹೋಗು ಎಂದು ಅತ್ತೆ-ಮಾವ ಹೇಳುತ್ತಿದ್ದರು. ಮೈದುನನೂ ಅದೇ ರೀತಿ ಮಾತಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದ್ದು, ಅವರು ಬಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಪುಷ್ಪಾವತಿ ಆರೋಪಿಸಿದ್ದಾರೆ.