ಆನೇಕಲ್: ಲಿವಿಂಗ್ ಟುಗೆದರ್ ನಲ್ಲಿದ್ದ ಒಡಿಶಾ ಮೂಲದ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಒಡಿಶಾ ಮೂಲದ ಸೀಮಾ ನಾಯಕ್(25) ಮತ್ತು ರಾಕೇಶ್(23) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ ಗಾಜು ಒಡೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ.
ಕೂಡಲೇ ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ರಾಕೇಶ್ ಕುಡಿದು ಬಂದು ಹಣಕ್ಕಾಗಿ ಪದೇ ಪದೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಭಾನುವಾರ ಸಹ ಹಣಕ್ಕಾಗಿ ಸೀಮಾ ಜೊತೆ ಜಗಳ ಮಾಡಿದ್ದು, ಹಣ ನೀಡಲ್ಲ ಎಂದು ಸೀಮಾ ಮಲಗಿದ್ದಳು. ಬೆಳಿಗ್ಗೆ ಎದ್ದು ನೋಡಿದಾಗ ರಾಕೇಶ್ ನೇಣು ಬಿಗಿದುಕೊಂಡಿದ್ದ. ಆತನಿಗೆ ಇನ್ನೂ ಜೀವ ಇರಬಹುದು ಎಂಬ ನಂಬಿಕೆಯಿಂದ ರಾಕೇಶ್ ಉಳಿಸಿಕೊಳ್ಳಲು ಒಂದಿಷ್ಟು ಪ್ರಯತ್ನಗಳನ್ನು ಸೀಮಾ ಮಾಡಿದ್ದಾರೆ. ಆದರೆ ಆತ ಮೃತಪಟ್ಟಿರೋದು ದೃಢವಾಗುತ್ತಿದ್ದಂತೆ ಸೀಮಾ ಕೂಡ ನೇಣಿಗೆ ಶರಾಣಗಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.