ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮತ್ತೊಂದು ವಿವಾದಕ್ಕೆ ತುತ್ತಾಗಿದ್ದು ಈ ಬಾರಿ ಸ್ಪರ್ಧಿಯೊಬ್ಬರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಹೌದು.. ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದ್ದು, ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ನಿಂದಿಸಿದ ಆರೋಪದಲ್ಲಿ ಈ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕಳೆದ ವಾರದ ಎಪಿಸೋಡ್‌ನಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಕೂತು ರಕ್ಷಿತಾ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ರಕ್ಷಿತಾರನ್ನು 'ಸ್ಲಮ್' ಎಂದು ಅಶ್ವಿನಿ ಗೌಡ ಕರೆದಿದ್ದರು. ಬಳಿಕ 'ಎಸ್' ಪದ ಬಳಕೆ ಮಾಡಿದ್ದರು. ಇದೇ ವಿಚಾರವಾಗಿ ಇದೀಗ ಪೊಲೀಸ್ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.
ಬಿಡದಿ ಪೊಲೀಸ್ ಠಾಣೆಯಲ್ಲಿ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಹಿರಿಯ ವಕೀಲ ಪ್ರಶಾಂತ್ ಮೆತಲ್ ಎಂಬುವವರಿಂದ ಅಶ್ವಿನಿ ಗೌಡ ವಿರುದ್ಧ ಜಾತಿ ನಿಂದನೆ, ವ್ಯಕ್ತಿ ನಿಂದನೆ ಆರೋಪದಡಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್‌ಬಾಸ್ ಮನೆಯಲ್ಲಿ ಸಹಸ್ಪರ್ಧಿ ಬಗ್ಗೆ ಅಶ್ವಿನಿ ಗೌಡ ಅವಹೇಳನಕಾರಿ ಪದ ಬಳಕೆ ಮಾಡಿದ ಆರೋಪದ ಮೇರೆಗೆ ಆಕೆಯ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ದೂರು ನೀಡಿದ್ದಾರೆ. ಇದು ವ್ಯಕ್ತಿ ನಿಂದನೆ ಎಂದು ಆರೋಪಿಸಿರುವ ಅವರು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಶೋ ಆಯೋಜಕರ ವಿರುದ್ಧವೂ ದೂರು ನೀಡಿದ್ದಾರೆ.
ಸಮಾಜದಲ್ಲಿ ಎಲ್ಲರೂ ಒಂದೇ, ಯಾವುದೇ ಜಾತಿ ಭೇದ ಹರಡಬಾರದು. ಅಶ್ವಿನಿ ಗೌಡ ಮಾತನ್ನು ತೆಗೆಯದೇ ಕಾರ್ಯಕ್ರಮ ಪ್ರಸಾರ ಮಾಡಿದ್ದು ತಪ್ಪು. ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ. ವಕೀಲರು ನೀಡಿದ ದೂರು ಆಧರಿಸಿ ಬಿಡದಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
'ಎಸ್' ಪದದ ವಿವಾದ
ರಕ್ಷಿತಾ ಶೆಟ್ಟಿ ಬಗ್ಗೆ 'ಸ್ಲಮ್' ಎಂದು ಅಶ್ವಿನಿ ಗೌಡ ಹೇಳಿದ್ದನ್ನು ಮ್ಯೂಟ್ ಮಾಡಲಾಗಿತ್ತು. ಆದರೆ ಆಕೆಯ ಪದ ಬಳಕೆ ವೀಕ್ಷಕರಿಗೆ ಅರ್ಥವಾಗಿತ್ತು. ಅಷ್ಟೇ ಅಲ್ಲ, ಮತ್ತೆ ಇದೇ ವಿಚಾರವಾಗಿ ಜಾಹ್ನವಿ ಬಳಿಕ ಮಾತನಾಡುತ್ತಾ 'ಎಸ್' ಅಂತ ಹೇಳ್ದೆ ಅಲ್ವಾ ಎಂದು ಅಶ್ವಿನಿ ಮತ್ತೆ ಅದೇ ಅರ್ಥದಲ್ಲಿ ಮಾತನಾಡಿದ್ದರು. ಜಿಯೋ ಹಾಟ್‌ಸ್ಟರ್‌ನಲ್ಲಿ ಇದು ಸ್ಟ್ರೀಮಿಂಗ್ ಆಗಿತ್ತು. ಬಳಿಕ ಅದನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದರು. ಆದರೂ ವೀಕ್ಷಕರು ಅದನ್ನು ಗಮನಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸಿದ್ದರು.
ಆಗಿದ್ದೇನು?
ಬಿಗ್‌ಬಾಸ್ ಮನೆಯಲ್ಲಿ ಮೊದಲಿನಿಂದಲೂ ರಕ್ಷಿತಾ ಅವರನ್ನು ಅಶ್ವಿನಿ ಗೌಡ ಹಾಗೂ ಜಾಹ್ನವಿ ಟಾರ್ಗೆಟ್ ಮಾಡುತ್ತಾ ಬರ್ತಿದ್ದಾರೆ. ತಾವೇ ಗೆಜ್ಜೆ ಸದ್ದು ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಲು ಯತ್ನಿಸಿದ್ದರು. ಈ ವಿಚಾರವಾಗಿ ಮನೆಯಲ್ಲೆ ದೊಡ್ಡ ಗಲಾಟೆ ನಡೆದಿತ್ತು.
ಕಳೆದ ಶುಕ್ರವಾರ ಮಧ್ಯಾಹ್ನ ರಕ್ಷಿತಾ ಬಗ್ಗೆ ಗಾರ್ಡನ್ ಏರಿಯಾದಲ್ಲಿಅಶ್ವಿನಿ ಗೌಡ ಹಾಗೂ ಜಾಹ್ನವಿ ಮಾತನಾಡುತ್ತಿದ್ದರು. ಈ ವೇಳೆ "ಅವಳು ಮಾಡಿದ್ದು ನಿನ್ನೆ ಇನ್ನು ನನ್ನ ತಲೆಯಲ್ಲೇ ಕೂತಿದೆ. ಹೆಂಗೆ ಆಡ್ತಿದ್ಲು ಅವ್ಳು. ತೀರ 'ಸ್ಲಮ್' ತರ ಆಡ್ತಿದ್ಲಪ್ಪ ಅವ್ಳು. ಅವಳ ಲೆವೆಲ್‌ಗೆ ನಾವೆಲ್ಲಾ ಇಳಿಯೋಕೆ ಆಗಲ್ಲ" ಎಂದಿದ್ದರು. ಬಳಿಕ ರಕ್ಷಿತಾ ಮಾತನಾಡುವ ಶೈಲಿಯನ್ನು ಇಮಿಟೇಟ್ ಮಾಡಿ ಅಶ್ವಿನಿ ವ್ಯಂಗ್ಯವಾಡಿದ್ದರು.
ಅದೇ ದಿನ ರಾತ್ರಿ 11 ಗಂಟೆಗೆ ಮತ್ತೆ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರೂ ಮಾತನಾಡುವ ವೇಳೆ "ಅವಳಿಗೆ ಫುಲ್ ಶೇಪ್ ಔಟ್ ಆಗೋಯ್ತು. ಏನು ಮಾತನಾಡಲಿಲ್ಲ ಇವತ್ತು. ನಾನು ಹೇಳಲಿಲ್ವಾ ಆ "S.." ಎಂದು ಅಶ್ವಿನಿ ಮತ್ತೆ ಹೇಳಿದ್ದರು.