ಹಾಸನ: ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕೊನೆಗೊಂಡಿದ್ದು, ನಿನ್ನೆ ಶುಕ್ರವಾರ ನಡೆದ ಹುಂಡಿ ಎಣಿಕೆ ಮತ್ತು ಟಿಕೆಟ್ ಆದಾಯ ಸೇರಿ 25.59 ಕೋಟಿ ಸಂಗ್ರಹವಾಗಿದೆ. ಇದು ದೇಗುಲದ ಇತಿಹಾಸದಲ್ಲೇ ಅತ್ಯಧಿಕ ಕಾಣಿಕೆಯಾಗಿದೆ.
ಸುಮಾರು 300 ಸಿಬ್ಬಂದಿ ಎಣಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಒಟ್ಟು ಕಾಣಿಕೆ ಮೊತ್ತ 3.69 ಕೋಟಿ ಎಂದು ಲೆಕ್ಕಿಸಲಾಯಿತು. ಈ ವರ್ಷದ ಟಿಕೆಟ್ ಆದಾಯ 21.92 ಕೋಟಿ ಆಗಿದೆ. ಅಕ್ಟೋಬರ್ 10ರಿಂದ 22ರವರೆಗೆ ಒಟ್ಟಾರೆ ಕಾಣಿಕೆ ಮತ್ತು ಟಿಕೆಟ್ ಆದಾಯ ಸೇರಿ 25.59 ಕೋಟಿ ಆಗಿದೆ.
ಇದರಲ್ಲಿ ಸುಮಾರು 8 ರಿಂದ 10 ಕೋಟಿ ರೂಪಾಯಿಗಳನ್ನು ಸಾರ್ವಜನಿಕ ವ್ಯವಸ್ಥೆ, ಪ್ರಸಾದ ವಿತರಣೆ, ಲಡ್ಡು ತಯಾರಿ, ವಿದ್ಯುತ್ ಅಲಂಕಾರ, ಹೂ ಅಲಂಕಾರ ಹಾಗೂ ಇತರೆ ಹಬ್ಬದ ಖರ್ಚುಗಳಿಗೆ ಬಳಸಲಾಗುತ್ತದೆ. ಉಳಿದ ಮೊತ್ತವನ್ನು ದೇವಸ್ಥಾನದ ಖಾತೆಯಲ್ಲಿ ಠೇವಣಿಯಾಗಿಡಲಾಗುತ್ತದೆ ಎಂದರು.
ಚಿನ್ನ, ಬೆಳ್ಳಿ ಮತ್ತು ವಿದೇಶಿ ಕರೆನ್ಸಿ
ದೇವರ ಹುಂಡಿಯಲ್ಲಿ ಹಣದ ಜೊತೆಗೆ 75 ಗ್ರಾಂ ಚಿನ್ನ, ಒಂದೂವರೆ ಕೇಜಿ 58 ಗ್ರಾಂ ಬೆಳ್ಳಿ ಮತ್ತು ತಾಮ್ರದ ವಸ್ತುಗಳು ಪತ್ತೆಯಾಗಿವೆ. ಜೊತೆಗೆ, ಅಮೆರಿಕದ ಐದು ಡಾಲರ್, ಇಂಡೋನೇಷ್ಯಾ ಮತ್ತು ಮಾಲ್ಡೀವ್ಸ್ ರಾಷ್ಟ್ರಗಳ ಕರೆನ್ಸಿ ನೋಟುಗಳೂ ಪತ್ತೆಯಾದವು.
ಭಕ್ತರ ಮನವಿ ಪತ್ರಗಳ ರಾಶಿ
ಹುಂಡಿ ಎಣಿಕೆ ವೇಳೆ ಈ ಬಾರಿ ಭಕ್ತರ ಭಾವನಾತ್ಮಕ ಮನವಿ ಪತ್ರಗಳೇ ಹೆಚ್ಚು ಪತ್ತೆಯಾಗಿವೆ. ‘ತಾಯಿ, ನನ್ನ ಕಷ್ಟ ದೂರಮಾಡು’, ‘ಕುಟುಂಬಕ್ಕೆ ಸುಖ, ಶಾಂತಿ ಕೊಡು’, ‘ಇಷ್ಟಾರ್ಥ ಸಿದ್ಧಿಸಲಿ’ ಎಂಬ ಬೇಡಿಕೆಗಳು ಹುಂಡಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡುಬಂದಿವೆ. ಈ ಬೇಡಿಕೆ ಪತ್ರಗಳನ್ನು ಹಣದಿಂದ ಪ್ರತ್ಯೇಕಿಸಿ ಗೌಪ್ಯವಾಗಿ ಸಂಗ್ರಹಿಸಿಡಲಾಗಿದೆ.
ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅವರ ನೇತೃತ್ವದಲ್ಲಿ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಅವರ ಮೇಲ್ವಿಚಾರಣೆಯಲ್ಲಿ ಸುಸೂತ್ರವಾಗಿ ನಡೆಸಲಾಯಿತು. ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಕಂಡುಬಂದ ಭಕ್ತರ ಸಂಖ್ಯೆಯೂ, ಅವರ ಅರ್ಪಣೆಗಳ ಪ್ರಮಾಣವೂ ಹಿಂದಿನ ವರ್ಷಗಳಿಗಿಂತ ಸಾಕಷ್ಟು ಹೆಚ್ಚಾಗಿತ್ತು.