ಬೆಂಗಳೂರು: ಬೆಂಗಳೂರಿನ ಸುರಂಗ ರಸ್ತೆ ಯೋಜನೆ ವಿರುದ್ಧ ಸಂಸದ ತೇಜಸ್ವಿ ಸೂರ್ಯ, ನಟ ಪ್ರಕಾಶ್ ಬೆಳವಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಯೋಜನೆಗೆ ಪರಿಸರ ಪರಿಣಾಮ ಮೌಲ್ಯಮಾಪನವನ್ನು ನಡೆಸದಿರುವುದು, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದೊಂದಿಗೆ ಸಮಾಲೋಚಿಸದಿರುವುದು ಮತ್ತು ವಿವರವಾದ ಯೋಜನಾ ವರದಿ, ವಿಶೇಷವಾಗಿ ಐತಿಹಾಸಿಕ ಲಾಲ್‌ಬಾಗ್ ಬಂಡೆಯ ಕೆಳಗೆ ಹಾದುಹೋಗುವ ಸುರಂಗದ ಜೋಡಣೆಯ ಬಗ್ಗೆ ಇರುವ ಕಳವಳಗಳನ್ನು ಉಲ್ಲೇಖಿಸಿ ಯೋಜನೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಸಂಸದ ತೇಜಸ್ವಿ ಸೂರ್ಯ ಸ್ವತಃ ವಕೀಲರೂ ಆಗಿದ್ದು, ಹೈಕೋರ್ಟ್‌ನಲ್ಲಿ ಖುದ್ದು ವಾದ ಮಂಡನೆ ಮಾಡಿ, ಈ ಯೋಜನೆ ಸುಮಾರು 6.5 ಎಕರೆ ಲಾಲ್‌ಬಾಗ್ ಭೂಮಿ ಮೇಲೆ ಪರಿಣಾಮ ಬೀರಬಹುದು. ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಗುರುತಿಸಲ್ಪಟ್ಟಿರುವ 3,000 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಲಾಲ್‌ಬಾಗ್ ಬಂಡೆಗೆ ಈ ಯೋಜನೆ ಮಾರಕವಾಗಿದೆ. ತೋಡುವ ಸುರಂಗದಿಂದಾಗಿ ಈ ಬಂಡೆಯು ಗಂಭೀರ ಅಪಾಯವನ್ನು ಎದುರಿಸುತ್ತದೆ. ಹಲವು ಮರಗಳಿಗೂ ಕೊಡಲಿ ಬೀಳಲಿದೆ ಎಂದು ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಯೋಜನೆಯೊಂದಿಗೆ ಸಂಬಂಧಿಸಿದ ಮರಗಳನ್ನು ಕಡಿಯುವ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಪರಿಸರ ಪರಿಣಾಮ ಮೌಲ್ಯಮಾಪನದ ಕುರಿತು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದಲೂ ಅಭಿಪ್ರಾಯ ಕೇಳಿದ ಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 28ರಂದು ಮುಂದೂಡಿದೆ.