ಬೆಂಗಳೂರು: ಮದ್ಯಪಾನ ಮಾಡಿ ಶಾಲಾ ಬಸ್ಗಳನ್ನು ಚಾಲನೆ ಮಾಡುವ ಚಾಲಕರಿಗೆ ನಗರದ ಸಂಚಾರ ಪೊಲೀಸರು ಶಾಕ್ ಕೊಟ್ಟಿದ್ದಾರೆ.
ಶಾಲಾ ಬಸ್ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಅಕ್ಟೋಬರ್ 24ರಂದು ನಗರದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಒಟ್ಟು 5,881 ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 36 ಮಂದಿ ಚಾಲಕರು ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಈ ಬೆಳವಣಿಗೆಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಪೋಷಕರ ಸಂಘದ ಬೆಂಗಳೂರು ಪೂರ್ವ ಕಾರಿಡಾರ್‌ನ ಸಂಯೋಜಕಿ ಮೇನಕಾ ರೆಡ್ಡಿ ಅವರು ಮಾತನಾಡಿ, 36 ಮಂದಿ ಚಾಲಕರ ಪೈಕಿ 9 ಮಂದಿ ಬೆಳ್ಳಂದೂರು ಮತ್ತು ದೊಮ್ಮಲೂರಿನ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆಂದು ಹೇಳಿದ್ದಾರೆ.
ಇನ್ವೆಂಚರ್ ಅಕಾಡೆಮಿಯ ಹಣಕಾಸು ಮತ್ತು ಆಡಳಿತ ವಿಭಾಗದ ಮುಖ್ಯಸ್ಥೆ ವರ್ಷಾ ಸಕ್ಸೇನಾ ಅವರು ಮಾತನಾಡಿ, ನಮ್ಮ ಶಾಲೆಯು ಪ್ರತೀ ವಾಹನದ ಚಾಲಕನನ್ನೂ ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತದೆ. ಮದ್ಯದ ಅಮಲಿನಲ್ಲಿದ್ದರೆ ಕೂಡಲೇ ವಜಾ ಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಮಾತನಾಡಿ, ಖಾಸಗಿ ವಾಹನ ಚಾಲಕರು ಸ್ವತಂತ್ರರಾಗಿದ್ದು, ಶಾಲಾ ನಿಯಮಗಳಿಂದ ಹೊರತಾಗಿರುತ್ತಾರೆಂದು ತಿಳಿಸಿದ್ದಾರೆ.
ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗಾನಂದ ಅವರು ಮಾತನಾಡಿ, 2015ರ ಆದೇಶದಲ್ಲಿ ಶಾಲಾ ಸಿಬ್ಬಂದಿಯ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ, ಇದನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದಾರೆ, ಅನಾಹುತ ತಪ್ಪಿಸಬಹುದು ಎಂದು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಮದ್ಯದ ಅಮಲಿನಲ್ಲಿರುವುದು ಪಾಸಿಟಿವ್ ಬಂದರೆ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಡಿಸಿಪಿ (ಸಂಚಾರ-ಪೂರ್ವ) ಅನುಪ್ ಶೆಟ್ಟಿ ಹೇಳಿದ್ದಾರೆ.