ಬೆಂಗಳೂರು: ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆಯು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿ, ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದೆ.
"ಪರಸ್ಪರ ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ. ನಿರ್ಧಿಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಕ್ರಿಮಿನಲ್ ಕಾನೂನಿನಡಿಯಲ್ಲಿ ಇದನ್ನು ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ" ಎಂದು ಹೈಕೋರ್ಟ್ ಹೇಳಿದೆ.
ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಭೇಟಿಯಾದ ಮಹಿಳೆ ತನ್ನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ರದ್ದು ಕೋರಿ 23 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ವಾಟ್ಸಪ್‌ನಲ್ಲಿ ಇಬ್ಬರು ಪರಸ್ಪರ ಚಾಟಿಂಗ್ ಮಾಡಿದ್ದು, ಹಾಗೇ ಫೋಟೋ, ವಿಡಿಯೋಗಳನ್ನೂ ವಿನಿಮಯ ಮಾಡಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಬಳಿಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ. ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ ಎಂದು ಹೇಳಿ, ಆರೋಪಿ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದೆ.
ಕಳೆದ ವರ್ಷ ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿದ್ದ ಸಾಂಪ್ರಸ್ ಆಂಥೋಣಿ, ಒಯೋ ರೂಮ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಬಳಿಕ ಆಂಥೋಣಿ ತಮ್ಮ ವಿರುದ್ಧದ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಮಹಿಳೆ, ಆಂಥೋಣಿ ಜತೆ ಒಂದು ವರ್ಷದವರೆಗೂ ಪರಸ್ಪರ ಚಾಟಿಂಗ್, ಕಾಲ್ನಲ್ಲಿ ಮಾತನಾಡಿದ್ದು, ಇಬ್ಬರೂ ಆತ್ಮಿಯರಾಗಿದ್ದರು. ನಂತರ ಒಂದು ವರ್ಷದ 2024ರ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಭೇಟಿಯಾಗಲು ನಿರ್ಧರಿಸಿ ರೆಸ್ಟೋರೆಂಟ್ನಲ್ಲಿ ಊಟ ಮಾಡಿದ್ದರು. ನಂತರ ಯುವಕ ಮಹಿಳೆಯನ್ನು ಓಯೋ ರೂಮ್ಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಮರುದಿನ ಯುವಕ ಆಕೆಯನ್ನು ಅಪಾರ್ಟ್ಮೆಂಟ್ಗೆ ಡ್ರಾಪ್ ಮಾಡಿದ್ದ. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ ಮಹಿಳೆ ಅದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ಸಾಂಪ್ರಸ್ ಆಂಥೋಣಿ ವಿರುದ್ಧ ಕೋಣಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಳು. ಲೈಂಗಿಕ ಕ್ರಿಯೆಗೆ ಮುಂದಾದಾಗ ಒಪ್ಪಿಗೆ ನಿರಾಕರಿಸಿದ್ದಾಗಿ ಮಹಿಳೆ ದೂರು ನೀಡಿದ್ದು, ಒಪ್ಪಿಗೆ ಸೂಚಿಸಿಲ್ಲವಾದರೂ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಆರೋಪಿಸಿದ್ದಾರೆ.